ಬೆಂಗಳೂರು , ಸೆ 24 (DaijiworldNews/MS): ಸಭಾಧ್ಯಕ್ಷರನ್ನು ಹೊರತುಪಡಿಸಿ ರಾಜ್ಯಕ್ಕೆ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರಷ್ಟೇ ಕೂರಬಹುದಾದ ಆಸನದಲ್ಲಿ ಲೋಕಸಭಾಧ್ಯಕ್ಷರನ್ನು ಕೂರಿಸುವುದು ಸಂವಿಧಾನ ವಿರೋಧಿ ಮಾತ್ರವಲ್ಲ, ರಾಜ್ಯ ಬಿಜೆಪಿ ಸರ್ಕಾರವೂ ವಿಧಾನಸಭೆಯ ಪಾವಿತ್ರ್ಯ ನಾಶ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಭಾಧ್ಯಕ್ಷರ ಆಸನದಲ್ಲಿ ಲೋಕಸಭಾಧ್ಯಕ್ಷ ಓಂ ಬಿರ್ಲಾ
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸಭಾಧ್ಯಕ್ಷರ ಆಸನದಲ್ಲಿ ಲೋಕಸಭಾಧ್ಯಕ್ಷರನ್ನು ಕೂರಿಸುವುದು ಸಂವಿಧಾನ ವಿರೋಧಿ ಮಾತ್ರವಲ್ಲ, ರಾಜ್ಯ ಬಿಜೆಪಿ ಸರ್ಕಾರವೂ ವಿಧಾನಸಭೆಯ ಪಾವಿತ್ರ್ಯ ನಾಶ ಮಾಡಿದೆ ಈ ಪಾಪದ ಫಲವನ್ನು ಬಿಜೆಪಿ ಹೊರಬೇಕಾಗುತ್ತದೆ. ಜನಪ್ರತಿನಿಧಿಗಳ ಪಾಲಿನ ಪವಿತ್ರಕ್ಷೇತ್ರವಾದ ವಿಧಾನಸಭೆಯ ಸಭಾಂಗಣದೊಳಗೆ ಶಾಸಕರಲ್ಲದವರಿಗೂ ಮುಕ್ತ ಪ್ರವೇಶ ನೀಡಿ ಅದನ್ನು ಸಾರ್ವಜನಿಕ ವೇದಿಕೆ ಮಾಡಿದ ಅಪಕೀರ್ತಿಗೆ ಮುಖ್ಯಮಂತ್ರಿ ಮತ್ತು ವಿಧಾನಸಭಾಧ್ಯಕ್ಷರು ಭಾಜನರಾಗಿದ್ದಾರೆ. ಇತಿಹಾಸ ಇದನ್ನು ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಮಂಡಲದ ಅಧಿವೇಶನವನ್ನೇ ನಿಯಮಾವಳಿಯಂತೆ ನಿಗದಿತ ದಿನಗಳ ಕಾಲ ನಡೆಸದೆ ಮೊಟಕು ಗೊಳಿಸುತ್ತಿರುವ ಬಿಜೆಪಿ ಸರ್ಕಾರ ಲೋಕಸಭಾಧ್ಯಕ್ಷರನ್ನು ಕರೆಸಿ 'ಪ್ರಜಾಪ್ರಭುತ್ವ ಮತ್ತು ಸಂಸದೀಯ ಮೌಲ್ಯಗಳು' ಎಂಬ ವಿಷಯದ ಮೇಲೆ ಪಾಠ ಮಾಡಿಸುತ್ತಿರುವುದು ಪ್ರಹಸನದಂತೆ ಕಾಣಿಸುತ್ತಿದೆ. ವಿಧಾನಸಭೆಯ ಕಾರ್ಯವಿಧಾನ/ನಡವಳಿಕೆಯ ನಿಯಮದಂತೆ ವರ್ಷದಲ್ಲಿ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕಾಗುತ್ತದೆ.ಇಲ್ಲಿಯ ವರೆಗೆ ಈ ವರ್ಷ ಅಧಿವೇಶನ ನಡೆದಿರುವುದು 30ದಿನ ಮಾತ್ರ. ಈ ವೈಫಲ್ಯ ಮುಚ್ಚಿಟ್ಟುಕೊಂಡು ಯಾವ ಮುಖ ಹೊತ್ತು ಲೋಕಸಭಾಧ್ಯಕ್ಷರಿಂದ ಪಾಠ ಕೇಳುತ್ತಿರಿ ಬಿಜೆಪಿ ಶಾಸಕರೇ? ಎಂದು ಪ್ರಶ್ನಿಸಿದ್ದಾರೆ.
ಆಪರೇಷನ್ ಕಮಲ ಎಂಬ ಅನೈತಿಕ ರಾಜಕೀಯದ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಬುನಾದಿಯನ್ನೇ ಬುಡಮೇಲು ಮಾಡಿರುವ ಬಿಜೆಪಿ ಪಕ್ಷದ ಸದಸ್ಯರಿಗೆ ‘ಪ್ರಜಾಪ್ರಭುತ್ವ ಮತ್ತು ಸಂಸದೀಯ ಮೌಲ್ಯ’ಗಳ ಬಗ್ಗೆ ಚರ್ಚಿಸುವ ಯಾವ ನೈತಿಕತೆ ಇದೆ? ಎಂದು ಕಿಡಿಕಾರಿದ್ದಾರೆ.