ಬೆಂಗಳೂರು, ಸೆ.24 (DaijiworldNews/PY): "ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ" ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ ಮಾಧುಸ್ವಾಮಿ ಹೇಳಿದ್ದಾರೆ.
ಶುಕ್ರವಾರ ವಿಧಾನ ಪರಿಷತ್ನಲ್ಲಿ ನಿಯಮ 68ರ ಅಡಿಯಲ್ಲಿ ಸಾರ್ವಜನಿಕ ಮಹತ್ವದ ವಿಷಯದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, "ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ರಕ್ಷಣೆ ಮಾಡುವುದಿಲ್ಲ. ಇದರಿಂದ ಸರ್ಕಾರಕ್ಕೆ ಏನೂ ಆಗಬೇಕಾಗಿಲ್ಲ. ನಮ್ಮ ಪೊಲೀಸರು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ" ಎಂದಿದ್ದಾರೆ.
"ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳು ತಡ ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ. ಪೊಲೀಸರು ಪ್ರಕರಣವನ್ನು ಮತ್ತೊಂದು ಠಾಣೆಗೆ ಕಳುಹಿಸಿದ್ದಾರೆ. ಹಾಗಾಗಿ ಸಮಯವಾಗಿದೆ. ಸರಿಯಾದ ಮಾಹಿತಿ ಸಿಗದೇ ವಿಳಂಬಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಸೂಕ್ತ ಕಾನೂನು ತೆಗೆದುಕೊಳ್ಳಲಿದ್ದಾರೆ" ಎಂದು ತಿಳಿಸಿದ್ದಾರೆ.
"ಮೈಸೂರಿನಲ್ಲಿ ಈ ರೀತಿಯಾದ ಘಟನೆ ನಡೆದಿದ್ದು, ದುರಾದೃಷ್ಟಕರ, ಇದು ನಾಗರೀಕ ಸಮಾಜ ಒಪ್ಪುವಂತದಲ್ಲ. ಯಾವುದೇ ಸರ್ಕಾರ ಕೂಡಾ ಇದನ್ನು ಸಹಿಸುವುದಿಲ್ಲ" ಎಂದಿದ್ದಾರೆ.