ಬೆಂಗಳೂರು, ಸೆ.24 (DaijiworldNews/PY): "ಸರ್ಕಾರದ ಉತ್ತರ ಕೇಳದೆ ಸದನದಿಂದ ಪಲಾಯನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ತಾನು ಮಾಡಿರುವ ಎಲ್ಲ ಆರೋಪಗಳೂ ಸತ್ಯಕ್ಕೆ ದೂರವಾದ, ನಿರಾಧಾರ ಮತ್ತು ರಾಜಕೀಯ ಪ್ರೇರಿತ ಆರೋಪಗಳು ಎಂದು ಸಾಬೀತುಪಡಿಸಿದೆ" ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೋವಿಡ್-19 ನಿರ್ವಹಣೆ ಕುರಿತು ಸದನದಲ್ಲಿ ನೆನ್ನೆ 5 ಗಂಟೆಗಳ ಕಾಲ ರಾಜಕೀಯ ಭಾಷಣ ಮಾಡಿದ ವಿಪಕ್ಷಗಳಿಗೆ ಇಂದು ಸರ್ಕಾರದ ಉತ್ತರ ಕೇಳುವ ಆಸಕ್ತಿಯೂ ಇಲ್ಲ, ಧೈರ್ಯವೂ ಇಲ್ಲ. ಸತ್ಯವನ್ನು ಕೇಳಲಾಗದೆ ಪಲಾಯನ ಮಾಡಿರುವ ಕಾಂಗ್ರೆಸ್ ಪಕ್ಷದ ಈ ನಡೆ, ಜನರ ಅರೋಗ್ಯದ ಬಗ್ಗೆ ಅವರಿಗೆ ಇರುವ ನಿಜವಾದ ಕಾಳಜಿ ಮತ್ತು ಬದ್ಧತೆಯನ್ನು ಬಟಾಬಯಲು ಮಾಡಿದೆ" ಎಂದು ಕಿಡಿಕಾರಿದ್ದಾರೆ.
"ಸರ್ಕಾರದ ಉತ್ತರ ಕೇಳದೆ ಸದನದಿಂದ ಪಲಾಯನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ತಾನು ಮಾಡಿರುವ ಎಲ್ಲ ಆರೋಪಗಳೂ ಸತ್ಯಕ್ಕೆ ದೂರವಾದ, ನಿರಾಧಾರ ಮತ್ತು ರಾಜಕೀಯ ಪ್ರೇರಿತ ಆರೋಪಗಳು ಎಂದು ಸಾಬೀತುಪಡಿಸಿದೆ. ಕಾಂಗ್ರೆಸ್ ಪಕ್ಷದ ಇಂದಿನ ನಡೆ ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ" ಎಂದಿದ್ದಾರೆ.
"ಕೋವಿಡ್-19 ಸಾವಿನಲ್ಲೂ ರಾಜಕೀಯ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷದ ಕೀಳು ಸಂಸ್ಕೃತಿಯನ್ನ ರಾಜ್ಯದ ಜನತೆ ಗಮನಿಸಿದ್ದಾರೆ. ಸಾವಿನ ಮನೆಯಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್ ಪಕ್ಷದ ಈ ನೀಚ ರಾಜಕೀಯವನ್ನು ಜನತೆ ಖಂಡಿತ ಕ್ಷಮಿಸುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಕಲಾಪವನ್ನು ಒಂದು ವಾರ ವಿಸ್ತರಣೆ ಮಾಡಿ ಎಂದು ಪ್ರತಿಪಕ್ಷ ಕಾಂಗ್ರೆಸ್ ಬೇಡಿಕೆ ಇಟ್ಟಿತ್ತು. ಆದರೆ, ಕಾಂಗ್ರೆಸ್ ಸದಸ್ಯರ ಬೇಡಿಕೆಗೆ ಒಪ್ಪಿಗೆ ಸಿಗದೇ ಇದ್ದಾಗ ಸಭಾತ್ಯಾಗ ಮಾಡಿದ್ದರು. ಹಾಗಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನು ಶುಕ್ರವಾರ ಅನಿರ್ದಿಷ್ಟಾಧಿಗೆ ಮುಂದೂಡಿದ್ದರು.
ಶುಕ್ರವಾರ ಕಲಾಪ ಪ್ರಾರಂಭವಾಗುತ್ತಿದ್ದಂತೆ ನಮ್ಮ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಸದ್ಯರು ಧರಣಿ ಆರಂಭಿಸಿದರು. ಈ ಸಂದರ್ಭ ಸದನದ ಬಾವಿಗಿಳಿದು ಒತ್ತಾಯಿಸಿದ ಕಾಂಗ್ರೆಸ್ ಸದಸ್ಯರು ಒಂದು ವಾರ ಅಧಿವೇಶನ ಮುಂದುವರಿಸಬೇಕು ಎಂದಿದ್ದಾರೆ.