ಬೆಂಗಳೂರು, ಸೆ.24 (DaijiworldNews/PY): "ಮಾನಮರ್ಯಾದೆ ಇಲ್ಲದ ಸರ್ಕಾರ ಇದಾಗಿದ್ದು, ಜನರ ಧ್ವನಿಯಾಗಿ ಹೋರಾಟ ನಡೆಸುತ್ತಿದ್ದೇವೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜನರ ಗಮನ ಸೆಳೆಯುವ ಸಲುವಾಗಿ ಈ ಹೋರಾಟ ನಡೆಸುತ್ತಿದ್ದೇವೆ. ಪ್ರತೀ ಗ್ರಾಮ ಸೇರಿದಂತೆ ವಾರ್ಡ್ಗಳಲ್ಲಿ ಹೋರಾಟ ರೂಪಿಸುತ್ತೇವೆ. ಸರ್ಕಾರಕ್ಕೆ ಮಾನಮರ್ಯಾದೆ ಇಲ್ಲ. ಹಾಗಾಗಿ ಜನರ ಧ್ವನಿಯಾಗಿ ಈ ಹೋರಾಟ ನಡೆಸುತ್ತಿದ್ದೇವೆ" ಎಂದಿದ್ದಾರೆ.
"ಇಂಧನ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಸಾಮಾನ್ಯ ಮಂದಿಗೆ ಮನೆ ಕಟ್ಟಲೂ ಸಾಧ್ಯವಾಗುತ್ತಿಲ್ಲ. ಸರ್ಕಾರ ಜನರ ಪಿಕ್ ಪಾಕೆಟ್ ಮಾಡುತ್ತಿದ್ದೆ. ನಾವು ಜನರ ಧ್ವನಿಯಾಗಿ ಹೋರಾಟ ಮಾಡುತ್ತಿದ್ದೇವೆ. ಅಕ್ಟೋಬರ್ನಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ. ಈ ಸರ್ಕಾರವನ್ನು ಜನರೇ ಕಿತ್ತೊಗೆಯಬೇಕು. ರೈತರಿಗೆ ಯಾವುದೇ ರೀತಿಯಾದ ಅನುಕೂಲ ಮಾಡಿಕೊಟ್ಟಿಲ್ಲ. ನಮ್ಮ ಹೋರಾಟ ಮುಂದುವರೆಯುತ್ತೆ" ಎಂದು ಹೇಳಿದ್ದಾರೆ.
ಬೆಲೆ ಏರಿಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಖಂಡಿಸಿದ್ದು, "ದೇಶದಾದ್ಯಂತ ಬೆಲೆ ಏರಿಕೆಯಿಂದ ಜನರು ಕಂಗಲಾಗಿದ್ದು, ಕೇಂದ್ರ ಸರ್ಕಾರ ಪ್ರತಿಯೊಬ್ಬರ ಜೇಬಿಗೂ ಕೈ ಹಾಕಿದೆ. ಮೋದಿ, ಬೊಮ್ಮಾಯಿ ಸರ್ಕಾರಗಳು ದಪ್ಪ ಚರ್ಮದ ಸರ್ಕಾರ, ಅವರು ಜನರ ಪರವಾಗಿಲ್ಲ" ಎಂದು ಕಿಡಿಕಾರಿದ್ದಾರೆ.
"ಬೆಲೆ ಏರಿಕೆಯಿಂದಾಗಿ ಪ್ರತಿಯೊಬ್ಬರ ಮನೆಗೆ ಬೆಂಕಿ ಬಿದಿದೆ. ಬಿಜೆಪಿಯದ್ದು ಜನರೋಧಿ ಸರ್ಕಾರ, ಕಾರ್ಪೋರೇಟ್ ಪರವಾಗಿ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ" ಎಂದಿದ್ದಾರೆ.