ಬೆಂಗಳೂರು, ಸೆ.24 (DaijiworldNews/PY): "ಕಾಂಗ್ರೆಸ್ಸಿಗರು ಈಗಾಗಲೇ ಮೂಲೆ ಗುಂಪಾಗಿದ್ದು, ಟಾಂಗಾ ಹಾಗೂ ಸೈಕಲ್ ಓಡಿಸುವುದಕ್ಕೆ ಮಾತ್ರವೇ ಸೀಮಿತ" ಎಂದು ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ಸಿಗರು ಸೋತ ಬಳಿಕ ದಿನಕ್ಕೊಂದು ಗಿಮಿಕ್ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಯಾವತ್ತಾದರೂ ಕಡಿಮೆ ಆಗಿತ್ತಾ?" ಎಂದು ಪ್ರಶ್ನಿಸಿದ್ದಾರೆ.
"ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಬೆಲೆ ಏರಿಕೆಯಾದರೆ ಆರ್ಥಿಕ ಸುಧಾರಣೆಗೆ ಎಂದು ಹೇಳುತ್ತಾರೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಬೆಲೆ ಏರಿಕೆಯಾದರೆ ಅದು ಅಕ್ರಮ ಎನ್ನುತ್ತಾರೆ. ಅವರಿಗೆ ಅವರ ಪಕ್ಷವನ್ನು ಏಕೆ ಬೆಳೆಸೋಕೆ ಆಗುವುದಿಲ್ಲ" ಎಂದು ಕೇಳಿದ್ದಾರೆ.
ಬೆಲೆ ಏರಿಕೆ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಈಗ ಟಾಂಗಾ ಮೂಲಕ ಜಾಥಾ ಆರಂಭಿಸಿದ್ದಾರೆ. ಕೆಪಿಸಿಸಿ ಕಚೇರಿಯಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರುಗಳು ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.