ಬೆಂಗಳೂರು, ಸೆ.24 (DaijiworldNews/PY): ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಇಂದು ಟಾಂಗಾ ಮೂಲಕ ವಿಧಾನಸೌಧಕ್ಕೆ ತಲುಪಿದ್ದಾರೆ.
ಕೆಪಿಸಿಸಿ ಕಚೇರಿಯಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಸೇರಿದಂತೆ ಶಾಸಕರು ಕಾರ್ಯಕರ್ತರು ಟಾಂಗಾ ಮೂಲಕ ಹೊರಟಿದ್ದಾರೆ.
ಅಗತ್ಯ ವಸ್ತುಗಳು ಸೇರಿದಂತೆ ಇಂಧನ ಬೆಲೆ ಏರಿಕೆ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಹಾಗೂ ಬಡ ವರ್ಗಗಳ ಜನರು ಕಷ್ಟಪಡುವಂತಾಗಿದೆ ಎಂದು ಆರೋಪಿಸಿ ಟಾಂಗಾ ಮೂಲಕ ಪ್ರತಿಭಟನಾ ಜಾಥಾ ಹೊರಟಿದ್ದಾರೆ. ಕಾಂಗ್ರೆಸ್ ಜಾಥಾದಲ್ಲಿ 50ಕ್ಕೂ ಅಧಿಕ ಟಾಂಗಾಗಳು ಭಾಗಿಯಾಗಲಿವೆ.
ಈ ಸಂದರ್ಭ ಸಂಚಾರ ದಟ್ಟಣೆ ಆಗುತ್ತಿರುವುದನ್ನ ಕಂಡ ಪೊಲೀಸರು ಕೈ ನಾಯಕರು ಹಾಗೂ ಶಾಸಕರಿಗೆ ಮಾತ್ರವೇ ಹೋಗಲು ಅವಕಾಶ ನೀಡಿದ್ದು, ಕಾರ್ಯಕರ್ತರ ಟಾಂಗಾಗಳಿಗೆ ತಡೆಯೊಡ್ಡಿದ್ದಾರೆ. ವಿಧಾನಸೌಧದತ್ತ ಎಂಟು ಟಾಂಗಾಗಳಿಗೆ ಮಾತ್ರವೇ ಅರ್ಧದಿಂದ ಮುಂದೆ ಹೋಗಲು ಅವಕಾಶ ನೀಡಲಾಗಿದೆ.