ಬೆಂಗಳೂರು, ಸೆ.24 (DaijiworldNews/HR): "ಕೊರೊನಾದಿಂದಾಗಿ ರಾಜ್ಯದಲ್ಲಿ ಸುಮಾರು 3 ರಿಂದ 4 ಲಕ್ಷ ಮಂದಿ ಮೃತಪಟ್ಟಿದ್ದು, ಸರ್ಕಾರ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದೆ" ಎಂದು ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಿಯಮ 69 ರಡಿ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯರು, "ಕೊರೊನಾದಿಂದ ಮೃತಪಟ್ಟ ಕುಟುಂಬಸ್ಥರಿಗೆಲ್ಲರಿಗೂ ತಲಾ 5 ಲಕ್ಷ ದಂತೆ ಪರಿಹಾರವನ್ನು ನೀಡಬೇಕು. ಜೊತೆಗೆ ಚಾಮರಾಜನಗರದಲ್ಲಿ ಆಮ್ಲಜನಕ ಸಿಗದೇ ಮೃತಪಟ್ಟ ಪ್ರಕರಣಕ್ಕೆ ಸಾಂಭಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದೂ ಒತ್ತಾಯಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, "ಕೊರೊನಾದ ಎರಡು ಅಲೆಗಳಿಂದ ಒಟ್ಟು 37,603 ಮಂದಿ ಸತ್ತಿದ್ದಾರೆ ಎಂದು ಸರ್ಕಾರ ಹೇಳಿದ್ದು, ಇದು ಸತ್ಯಕ್ಕೆ ದೂರವಾದ ಸಂಗತಿ. ಅರವಿಂದ್ ಸುಬ್ರಹ್ಮಣ್ಯ ಅವರ ವರದಿ ಪ್ರಕಾರ ಕರ್ನಾಟಕದಲ್ಲಿ 3 ರಿಂದ 4 ಲಕ್ಷ ಜನ ಕೊರೊನಾಗೆ ಬಲಿಯಾಗಿದ್ದಾರೆ. ನೀವು ಸತ್ಯ ಏಕೆ ಮುಚ್ಚಿಡುತ್ತಿದ್ದೀರಿ" ಎಂದು ಪ್ರಶ್ನಿಸಿದ್ದಾರೆ.
ಇನ್ನು "ಸುವರ್ಣ ಆರೋಗ್ಯ ಟ್ರಸ್ಟ್ ಮಾಹಿತಿಯ ಪ್ರಕಾರ, ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿ 1.32 ಲಕ್ಷ ಮತ್ತು 2 ನೇ ಅಲೆಯ ಸಂದರ್ಭ ಈವರೆಗೆ 1.19 ಲಕ್ಷ ಕ್ಲೈಮ್ಗಳು ಬಂದಿದ್ದು, ಆದ್ದರಿಂದ ಸಾವುಗಳ ಪರಿಶೋಧನೆ (ಡೆಟ್ ಆಡಿಟ್) ಮಾಡಿಸಬೇಕು" ಎಂದು ಆಗ್ರಹಿಸಿದ್ದಾರೆ.