ಬೆಳಗಾವಿ, ಸೆ 24 (DaijiworldNews/MS): ಇಲ್ಲಿನ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎರಡು ವರ್ಷದ ಬಾಲಕಿ ಪತ್ತೆಯಾಗಿದ್ದಾಳೆ. ಬೆತ್ತಲೆ ಸ್ಥಿತಿಯಲ್ಲಿದ್ದ ಬಾಲಕಿಯ ಮೈಮೇಲೆ ಸಿಗರೇಟ್ ನಿಂದ ಸುಟ್ಟ ಗಾಯಗೊಳಿಸಲಾಗಿದೆ. ಗ್ರಾಮಸ್ಥರು ಬಾಲಕಿಯನ್ನು ರಕ್ಷಿಸಿ ಅಥಣಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಬೆಳಗಾವಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗ್ನವಾಗಿದ್ದ ಮಗುವಿಗೆ ಚಿತ್ರಹಿಂಸೆ ನೀಡಲಾಗಿದೆ. ಖಾಸಗಿ ಅಂಗವೂ ಸೇರಿದಂತೆ ಮೈತುಂಬ ಸಿಗರೇಟಿನಿಂದ ಸುಟ್ಟಂತಹ ಗಾಯಗಳಾಗಿದ್ದು, ಬಾಲಕಿ ಎರಡು ದಿನಗಳ ಕಾಲ ಗದ್ದೆಯಲ್ಲಿ ನರಳಾಡಿದ್ದಾಳೆ. ನರಳಾಟದ ಸದ್ದು ಕೇಳಿ ಕಬ್ಬಿನ ಗದ್ದೆಯಲ್ಲಿ ಹುಡುಕಾಡಿದ ಗ್ರಾಮಸ್ಥರು ಅಮಾನವೀಯ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಮಗುವಿನ ಪೋಷಕರು ಯಾರೆಂಬುದು ಗೊತ್ತಾಗಿಲ್ಲ.
ಸ್ಥಳಕ್ಕೆ ಡಿವೈಎಸ್ಪಿ ಎಸ್. ಗಿರೀಶ್, ಸಿಪಿಐ ಶಂಕರಗೌಡ ಬಸನಗೌಡರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಥಣಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.