ಬೆಂಗಳೂರು, ಸೆ.24 (DaijiworldNews/PY): "ನಕಲಿ ಪದವಿ, ಡಾಕ್ಟರೇಟ್ ನೀಡುವ ಸಂಸ್ಥೆಗಳ ವಿರುದ್ದ ಎಫ್ಐಆರ್ ದಾಖಲಿಸುವಂತೆ 2021ರ ಫೆಬ್ರವರಿ 26ರಂದು ಆದೇಶ ಹೊರಡಿಸಲಾಗಿದೆ" ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಬಗ್ಗೆ ವಿಧಾನ ಪರಿಷತ್ನಲ್ಲಿ ಮಾಹಿತಿ ನೀಡಿದ ಅವರು, "ವಿಶ್ವವಿದ್ಯಾಲಯಗಳಲ್ಲಿ ಗೌರವ ಡಾಕ್ಟರೇಟ್ ನೀಡುವುದಕ್ಕೆ ನಿಯಮಾವಳಿಗಳಿವೆ. ನಿಯಮಾವಳಿಗಳ ಅಡಿಯಲ್ಲಿ ಸೂಕ್ತ ಪ್ರಕ್ರಿಯೆ ನಡೆಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಆದರೆ, ರಾಜ್ಯದಲ್ಲಿ ಯಾವುದೇ ಸಂಸ್ಥೆಗಳು ನಕಲಿ ಪದವಿ, ಡಾಕ್ಟರೇಟ್ ನೀಡಿದ್ದಲ್ಲಿ ಅಂತಹ ಸಂಸ್ಥೆಗಳ ವಿರುದ್ದ ಎಫ್ಐಆರ್ ದಾಖಲಿಸಲಾಗುವುದು" ಎಂದು ತಿಳಿಸಿದ್ದಾರೆ.
"ರಾಜ್ಯದಲ್ಲಿ 23 ಸರ್ಕಾರಿ ವಿಶ್ವವಿದ್ಯಾಲಯಗಳಿವೆ. ಇಲ್ಲಿಯವರೆಗೆ ಅವುಗಳು 1,856 ಮಂದಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಇನ್ನು 21 ಖಾಸಗಿ ವಿಶ್ವವಿದ್ಯಾಲಯಗಳಿದ್ದು, ಅವುಗಳ ಪೈಕಿ 5 ವಿಶ್ವವಿದ್ಯಾಲಯಗಳು 23 ಮಂದಿಗೆ ಗೌರವ ಡಾಕ್ಟರೇಟ್ ನೀಡಿವೆ" ಎಂದು ಹೇಳಿದ್ದಾರೆ.