ಬೆಂಗಳೂರು, ಸೆ. 23 (DaijiworldNews/SM): ವಿಧಾನ ಮಂಡಲದ ಜಂಟಿ ಅಧಿವೇಶನ ನಡೆಸಲು ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಆಹ್ವಾನಿಸಲು ಬಿಜೆಪಿ ಸರಕಾರ ಮುಂದಾಗಿದ್ದು, ಇದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖಂಡಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಿಯಮಗಳ ಪ್ರಕಾರ ರಾಷ್ಟ್ರಪತಿ ಹಾಗೂ ರಾಜ್ಯಪಾಲರು ವಿಧಾನಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಬಹುದು. ಅದನ್ನು ಹೊರತುಪಡಿಸಿ ಇತರರಿಗೆ ಭಾಷಣ ಮಾಡುವ ಅವಕಾಶವಿಲ್ಲ. ಹಲವು ದಶಕಗಳ ಐತಿಹ್ಯದ ವಿಧಾನಸಭೆಗೆ ಚ್ಯುತಿ ತರುವ ನಿರ್ಧಾರವನ್ನು ಸರಕಾರ ಕೈಗೊಂಡಿದೆ ಎಂದು ಡಿಕೆಶಿ ಕಿಡಿ ಖಾರಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ, ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕರೆಸಿ, ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಸೇರಿಸಿ ವಿಧಾನಸಭೆಯಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ ಎಂದರು. ಅಲ್ಲದೆ, ಸರಕಾರದ ಕ್ರಮವನ್ನು ಡಿಕೆ ಶಿವಕುಮಾರ್ ತೀವ್ರವಾಗಿ ಖಂಡಿಸಿದರು.