ಬೆಂಗಳೂರು, ಸ.23 (DaijiworldNews/HR): ಪಲ್ಸ್ ಪೋಲಿಯೋ ಮಾದರಿಯಲ್ಲಿ ಕಾಲುಬಾಯಿ ರೋಗಕ್ಕೆ ವ್ಯವಸ್ಥಿತ ಲಸಿಕಾ ಅಭಿಯಾನವನ್ನು ಕರ್ನಾಟಕದಲ್ಲಿ ನಡೆಸಲಾಗುವುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, "ಕರ್ನಾಟಕದ 78 ತಾಲೂಕುಗಳ 419 ಹಳ್ಳಿಗಳಲ್ಲಿ ಕಾಲುಬಾಯಿ ರೋಗೊದ್ರೇಕವು 4475 ಜಾನುವಾರುಗಳಲ್ಲಿ ಕಂಡುಬಂದಿದ್ದು, ಉಳಿದ ಜಾನುವಾರುಗಳು ಚಿಕಿತ್ಸೆಯಿಂದ ಗುಣಮುಖ ಆಗಿರುತ್ತವೆ. ಪಶುಸಂಗೋಪನೆ ಇಲಾಖೆಯ ವೈದ್ಯಾಧಿಕಾರಿಗಳು ನಿರಂತರವಾಗಿ ರೋಗೊದ್ರೇಕ ಕಂಡುಬಂದ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ತೀವ್ರವಾಗಿ ನಿಗಾ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ 57 ರಾಸುಗಳು ಇಲ್ಲಿಯವರೆಗೆ ಮೃತಪಟ್ಟಿದ್ದು 4066 ಜಾನುವಾರುಗಳು ಚಿಕಿತ್ಸೆಯಿಂದ ಗುಣಮುಖವಾಗಿವೆ" ಎಂದಿದ್ದಾರೆ.
ಇನ್ನು ಕಾಲುಬಾಯಿ ರೋಗ ಕಂಡುಬಂದ 5 ಕೀ.ಮಿ ವ್ಯಾಪ್ತಿಯಲ್ಲಿ ರಿಂಗ್ ವ್ಯಾಕ್ಸಿನ್ ನಡೆಸಲಾಗುತ್ತಿದ್ದು, ಸಧ್ಯ 4 ಲಕ್ಷಕ್ಕೂ ಹೆಚ್ಚು ಜಾನುವಾರುಗಳಿಗೆ ಲಸಿಕೆಯನ್ನು ನೀಡಲಾಗಿದೆ" ಎಂದರು.
ಈ ತಿಂಗಳ ಅಂತ್ಯದವರೆಗೆ ಕೇಂದ್ರ ಸರ್ಕಾರದಿಂದ 25 ಲಕ್ಷ ಡೋಸ್ ಲಸಿಕೆ ಸರಬರಾಜು ಆಗುತ್ತಿದ್ದು ಅವುಗಳನ್ನು ರೋಗೊದ್ರೇಕ ಕಂಡುಬಂದ ಜಿಲ್ಲೆಗಳಲ್ಲಿ ಆದ್ಯತೆ ಮೇರೆಗೆ ಪೂರೈಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.