ಬೆಂಗಳೂರು, ಸೆ 23 (DaijiworldNews/MS): ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಕಳೆದ ರಾತ್ರಿ ವಾಷಿಂಗ್ಟನ್ ಡಿಸಿಗೆ ತಲುಪಿದ್ದು, ಕ್ವಾಡ್ ಲೀಡರ್ಸ್ ಶೃಂಗಸಭೆ, ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಹಾಗೂ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಜೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ದೆಹಲಿಯಿಂದ ವಾಷಿಂಗ್ಟನ್ಗೆ 12ರಿಂದ 15 ಗಂಟೆಯ ವಿಮಾನದಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ಅಮೇರಿಕಾ ಪ್ರವಾಸದ ವೇಳೆಯಲ್ಲಿ ಪ್ರಯಾಣದ ವೇಳೆ ಪೋಟೋ ಹಂಚಿಕೊಂಡಿರುವ ಪ್ರಧಾನಿ ಮೋದಿ " ದೀರ್ಘ ಪ್ರಯಾಣದಲ್ಲಿ ಫೈಲ್ - ಪೇಪರ್ ಗಳ ಕೆಲಸಗಳನ್ನು ಮಾಡುವ ಅವಕಾಶ ದೊರಕುತ್ತದೆ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ವ್ಯಂಗ್ಯವಾಡಿರುವ ಕಾಂಗ್ರೆಸ್ " ಫೋಟೋ ಶೂಟ್ ಚೆನ್ನಾಗಿದೆ ನರೇಂದ್ರ ಮೋದಿಯವರೇ , ಆದರೆ ಲೈಟಿಂಗ್ ಕಳಪೆಯಾಗಿದೆ! ಟಾರ್ಚ್ ಬೆಳಕು ಬಳಸುವ ಬದಲು ನಿಮ್ಮ ಹೊಚ್ಚ ಹೊಸ 8,500 ಕೋಟಿ ಬೆಲೆಯ ವಿಮಾನದಲ್ಲಿ ಫೋಟೋಶೂಟ್ಗಾಗಿಯೇ ಪ್ರತ್ಯೇಕ ಲೈಟಿಂಗ್ ವ್ಯವಸ್ಥೆ ಮಾಡಿಸಿಕೊಳ್ಳಿ! ಅಂದಹಾಗೆ ಮಾರಲು ದೇಶದ ಇನ್ಯಾವ ಆಸ್ತಿಯ ಪಟ್ಟಿ ನೋಡುತ್ತಿದ್ದೀರಿ !? ಎಂದು ವ್ಯಂಗ್ಯವಾಡಿದೆ.
ಪ್ರಧಾನಿ ಪ್ರಯಾಣಿಸಿದ ಬೋಯಿಂಗ್ 777 ವಿಮಾನ ದೀರ್ಘಾವಧಿಯ ಹಾರಾಟದ ಸಾಮರ್ಥ್ಯ ಹೊಂದಿದೆ. ಸಾಮಾನ್ಯವಾಗಿ ದೆಹಲಿಯಿಂದ ವಾಷಿಂಗ್ಟನ್ಗೆ 12ರಿಂದ 15 ಗಂಟೆಯ ಪ್ರಯಾಣ ಮಾಡಬೇಕಾಗುತ್ತದೆ. ಹೀಗಾಗಿ ಈ ಮೊದಲು ಫ್ರಾಂಕ್ಫರ್ಟ್ನಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು. ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿ ಇಂಧನ ಪೂರಣ ಮಾಡಲಾಗುತ್ತಿತ್ತು. ಆದರೆ ಇದು ದೀರ್ಘಾವಧಿಯ ಹಾರಾಟದ ಸಾಮರ್ಥ್ಯ ಹೊಂದಿದೆ. ಮಾರ್ಗ ಮಧ್ಯೆ ಇಂಧನ ಮರುಭರ್ತಿಯ ಅಗತ್ಯ ಇರುವುದಿಲ್ಲ.ಪ್ರಧಾನಿ ಮೋದಿಗಾಗಿ ಕಳೆದ ವರ್ಷ 4 ಸಾವಿರದ 500 ಕೋಟಿ ರೂಪಾಯಿ ವೆಚ್ಚದಲ್ಲಿ ಬೋಯಿಂಗ್ ವಿಮಾನ ಖರೀದಿ ಮಾಡಲಾಗಿತ್ತು. ಅಂದಹಾಗೆ, ಈ ವಿಮಾನದಲ್ಲಿ 2ನೇ ಬಾರಿಗೆ ಪ್ರಧಾನಿ ಮೋದಿ ವಿದೇಶ ಪ್ರಯಾಣ ಮಾಡಿದ್ದಾರೆ. ಪ್ರಸಕ್ತ ವರ್ಷ ಮಾರ್ಚ್ನಲ್ಲಿ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿದ್ದರು.