ಬೆಂಗಳೂರು, ಸ.23 (DaijiworldNews/HR): ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಲೋಕೇಶಪ್ಪ ಎಂಬಾತ ಪೋಷಕಿಯಿಂದಲೇ ಮಸಾಜ್ ಮಾಡಿಸಿಕೊಂಡ ಆರೋಪ ಕೇಳಿ ಬಂದಿದ್ದು, ಬಿಬಿಎಂಪಿಯು ಲೋಕೇಶಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಿದೆ.
ಮುಖ್ಯ ಶಿಕ್ಷಕ ಮಸಾಜ್ ಮಾಡಿಸಿಕೊಂಡ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಬುಧವಾರ ಸಂಜೆ ಅಮಾನತು ಆದೇಶವನ್ನು ಬಿಬಿಎಂಪಿ ಹೊರಡಿಸಿದೆ.
ಮಗುವನ್ನು ಶಾಲೆಗೆ ದಾಖಲಿಸಲು ಬಂದ ಮಹಿಳೆಯಲ್ಲಿ ಆಕೆಯ ವೃತ್ತಿಯ ಬಗ್ಗೆ ಶಿಕ್ಷಕ ಲೋಕೆಶಪ್ಪ ವಿಚಾರಿಸಿದ್ದರು. ಬ್ಯೂಟಿ ಪಾರ್ಲರ್ ನಡೆಸುತ್ತಿರುವುದಾಗಿ ಆ ಮಹಿಳೆ ತಿಳಿಸಿದ್ದರು. ಈ ವೇಳೆ ಲೋಕೇಶಪ್ಪ ಮಹಿಳೆಯನ್ನು ತರಗತಿ ಕೊಠಡಿಯೊಂದಕ್ಕೆ ಕರೆದೊಯ್ದು ಮಸಾಜ್ ಮಾಡಿಸಿಕೊಂಡಿದ್ದಾನೆ. ಲೋಕೇಶಪ್ಪ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯವನ್ನು ಶಾಲೆಯ ಶಿಕ್ಷಕರೊಬ್ಬರು ಸೆರೆ ಹಿಡಿದಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ವಿಚಾರಿಸಿದಾಗ ಲೋಕೇಶಪ್ಪ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಶಿಕ್ಷಣ) ಶಂಕರ್ ಬಾಬು ರೆಡ್ಡಿ ಹೇಳಿದ್ದಾರೆ.
ಬಿಬಿಎಂಪಿಯ ಕೋದಂಡರಾಮಪುರ ಪ್ರೌಢ ಶಾಲೆಯನ್ನು ಖಾಸಗಿ ಕೆಲಸಕ್ಕಾಗಿ ಬಳಸಿದ್ದಕ್ಕಾಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಮತ್ತು ಕರ್ನಾಟಕ ನಾಗರಿಕ ಸೇವೆಗಳ ನಿಯಮಗಳ ಪ್ರಕಾರ ಸರ್ಕಾರಿ ಕೆಲಸದ ಸಮಯದಲ್ಲಿ ಕರ್ತವ್ಯ ಲೋಪ ಮತ್ತು 1958 ರ ಕೆಸಿಎಸ್ಆರ್ ನಿಯಮ 98 ರ ಅಡಿಯಲ್ಲಿ ಆತ ಜೀವನಾಂಶ ಭತ್ಯೆಗೆ ಅರ್ಹನಾಗಿರುತ್ತಾನೆ ಎಂದು ಅವರು ಹೇಳಿದರು.
ಮೂಲಗಳ ಪ್ರಕಾರ, ಲೋಕೇಶಪ್ಪ ಇಂತಹ ಅನೇಕ ಅನೈತಿಕ ಚಟುವಟಿಕೆಗಳಲ್ಲಿ ಮಹಿಳೆಯರೊಂದಿಗೆ ಸಾಂದರ್ಭಿಕ ನಡವಳಿಕೆಯಲ್ಲಿ ಭಾಗಿಯಾಗಿದ್ದರು. ಅವರು ಶಾಲೆಯ ಭದ್ರತಾ ಸಿಬ್ಬಂದಿಯ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅವರು ಹೇಳಿದರು.