ನವದೆಹಲಿ, ಸೆ 23 (DaijiworldNews/MS): ಸೀರೆ ಭಾರತದ ಅತ್ಯಂತ ಜನಪ್ರಿಯ ಮತ್ತು ಸಾಂಪ್ರದಾಯಿಕ ಉಡುಗೆಗಳಲ್ಲಿ ಒಂದಾಗಿದೆ. ಸೀರೆ ಎಂದಿಗೂ ಫ್ಯಾಷನ್ನಿಂದ ಹೊರಹೋಗಲು ಸಾಧ್ಯವಿಲ್ಲ. ಆದರೆ ಸೀರೆ ಉಟ್ಟಿದ್ದಾರೆಂದು ದೆಹಲಿಯ ರೆಸ್ಟೋರೆಂಟ್ ಮಹಿಳೆಗೆ ಪ್ರವೇಶ ನಿರಾಕರಿಸಿದೆ.
ನವದೆಹಲಿಯ ದಕ್ಷಿಣ ಭಾಗ ಅನ್ಸಲ್ ಪ್ಲಾಜಾದಲ್ಲಿರುವ ರೆಸ್ಟೋರೆಂಟ್ ನಲ್ಲಿ ಈ ಘಟನೆ ನಡೆದಿದೆ. ಅನಿತಾ ಚೌದರಿ ಎಂಬ ಮಹಿಳೆ ಸೀರೆಯುಟ್ಟು ರೆಸ್ಟೋರೆಂಟ್ ಒಳಗೆ ಪ್ರವೇಶಿಸಲು ಮುಂದಾದಗ ಅಲ್ಲಿನ ಸಿಬ್ಬಂದಿ ಆಕೆಯನ್ನು ತಡೆದಿದ್ದಾರೆ. ಈ ವಿಡಿಯೋವನ್ನು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ನೆಟ್ಟಿಗರು ರೆಸ್ಟೋರೆಂಟ್ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ.
ಅನಿತಾ ಚೌದರಿ ಸೆರೆ ಹಿಡಿದ ವಿಡಿಯೋದಲ್ಲಿ ರೆಸ್ಟೋರೆಂಟ್ ಸಿಬ್ಬಂದಿಯೊಂದಿಗೆ ವಾಗ್ವಾದದ ಮಾಡಿ `ಸೀರೆಗೆ ಅನುಮತಿ ಇಲ್ಲ ಎಂದು ನನಗೆ ತೋರಿಸಿ' ಎಂದು ಮಹಿಳೆ ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ರೆಸ್ಟೋರೆಂಟ್ನ ಮಹಿಳಾ ಸಿಬ್ಬಂದಿ 'ಮೇಡಂ, ನಾವು ಸ್ಮಾರ್ಟ್ ಕ್ಯಾಶುವಲ್ ಅನ್ನು ಮಾತ್ರ ಅನುಮತಿಸುತ್ತೇವೆ. ಸೀರೆ ಸ್ಮಾರ್ಟ್ ಕ್ಯಾಶುಯಲ್ ಅಡಿಯಲ್ಲಿ ಬರುವುದಿಲ್ಲ. ಅಷ್ಟೇ...' ಎಂದು ಹೇಳಿ ಹೋಗುವುದನ್ನೂ ಇಲ್ಲಿ ನೋಡಬಹುದಾಗಿದೆ.