ಕೋಲ್ಕತ್ತಾ, ಸೆ. 22 (DaijiworldNews/SM): ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಭವಾನಿಪುರ ಕ್ಷೇತ್ರದಿಂದ ಚುನಾವಣೆಗೆ ಧುಮುಕಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ನಾನು ಮುಖ್ಯಮಂತ್ರಿಯಾಗಿ ಮುಂದುವರೆಯಲು ಪ್ರತಿಯೊಬ್ಬರೂ ನನಗೆ ಮತನೀಡಬೇಕು. ಇಲ್ಲದಿದ್ದರೆ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ದೀದಿ ಹೇಳಿದ್ದಾರೆ.
ಏನೇ ಸಮಸ್ಯೆಗಳಿದ್ದರೂ ಈ ಬಾರಿ ತಾವು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಆ ಮೂಲಕ ನನ್ನ ಗೆಲುವಿಗೆ ಕಾರಣರಾಗಬೇಕು. ಇಲ್ಲದಿದ್ದಲ್ಲಿ ನಾನು ಸಿಎಂ ಖುರ್ಚಿ ತ್ಯಜಿಸಬೇಕಾದಿತು ಎಂದು ದೀದಿ ಹೇಳಿದ್ದಾರೆ.
ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 292 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಪಡೆಯುವ ಮೂಲಕ ಭರ್ಜರಿ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಆದರೆ ನಂದಿಗ್ರಾಮದಲ್ಲಿ ಸೋಲು ಅನುಭವಿಸಿದ ಮಮತಾ ಬ್ಯಾನರ್ಜಿ ಅವರು ಈಗ ಭವಾನಿಪುರದಲ್ಲಿ ಪ್ರತಿ ಮತವನ್ನು ತಮಗೆ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.