ಬೆಂಗಳೂರು, ಸೆ.22 (DaijiworldNews/PY): "ತಿರುಗಿದ ಕಾಲಚಕ್ರದಲ್ಲಿ ಬಿಜೆಪಿಯೇ ಸಾಕಿದ ಹದ್ದುಗಳು ಬಿಜೆಪಿಯನ್ನೇ ಕುಕ್ಕುತ್ತಿವೆ, ಹಿಂದೂ ವಿರೋಧಿ ಬಿರುದು ದಯಪಾಲಿಸಿವೆ!" ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಉಪ್ಪು ತಿಂದಾದಮೇಲೆ ನೀರು ಕುಡಿಯಲೇಬೇಕು ಎನ್ನಲು ಬಿಜೆಪಿಯೇ ಸಾಕ್ಷಿ! ಇತರರಿಗೆ ಬಿಜೆಪಿ ಹಿಂದೂ ವಿರೋಧಿ ಪಟ್ಟ ಕಟ್ಟುತ್ತಿತ್ತು, ತಿರುಗಿದ ಕಾಲಚಕ್ರದಲ್ಲಿ ಬಿಜೆಪಿಯೇ ಸಾಕಿದ ಹದ್ದುಗಳು ಬಿಜೆಪಿಯನ್ನೇ ಕುಕ್ಕುತ್ತಿವೆ, ಹಿಂದೂ ವಿರೋಧಿ ಬಿರುದು ದಯಪಾಲಿಸಿವೆ! ಸಿಎಂ ಹಿಂದೂ ವಿರೋಧಿ ಎಂಬ ನಿಮ್ಮವರ ಈ ಮಾತು ಒಪ್ಪುವಿರಲ್ಲವೇ ಬಿಜೆಪಿ?!" ಎಂದು ಪ್ರಶ್ನಿಸಿದೆ.
"ದೇಶದೊಳಗೆ ನುಸುಳಲು ಮಾದಕವಸ್ತುಗಳ ಕಳ್ಳಸಾಗಾಣಿಕೆದಾರರಿಗೆ, ಭಯೋತ್ಪಾದಕರಿಗೆ ಗುಜರಾತ್ ಬಹುಪ್ರಿಯ ಸ್ಥಳ. ದೊಡ್ಡಮಟ್ಟದ ಡ್ರಗ್ಸ್ ದೇಶದೊಳಗೆ ಬರುವುದು ಗುಜರಾತ್ ಮೂಲಕವೇ ಏಕೆ? ಪ್ರಧಾನಿ ನರೇಂದ್ರ ಮೋದಿ ಅವರು ಕಳ್ಳರಿಗೆ ಅನುಕೂಲಕರ ವಾತಾವರಣ ನಿರ್ಮಿಸಿದ್ದಾರೆಯೇ? ಗುಜರಾತಿನದ್ದು ಡ್ರಗ್ಸ್ ಮಾಡೆಲ್ ಎಂಬುದು ಈಗ ದೇಶದ ಜನತೆಗೆ ಈಗ ಅರಿವಾಗಿದೆ!" ಎಂದಿದೆ.
"ಗುಜರಾತಿನ ಅದಾನಿ ಪೋರ್ಟ್ನಲ್ಲಿ ಹಿಂದೆಂದೂ ಕಾಣದ ದಾಖಲೆ ಮೊತ್ತದ 3000 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಹಮ್ ದೋ ಹಮಾರ ದೋ ಸರ್ಕಾರದಲ್ಲಿ ಮೋದಿ ಮಿತ್ರರು ಎಲ್ಲಾ ಬಗೆಯ ವ್ಯವಹಾರಗಳಿಗೂ ಇಳಿದರೆ? ಈ ದೊಡ್ಡ ಮಟ್ಟದ ಡ್ರಗ್ಸ್ ಅಫಗಾನಿಸ್ತಾನದಿಂದ ಬಂದಿದ್ದು ಹೇಗೆ, ತಾಲಿಬಾನಿಗಳೊಂದಿಗೆ ಸಂಪರ್ಕ ಹೊಂದಿದವರಾರು? ಈ ಬಗ್ಗೆ ಮೋದಿ ಮೌನವೇಕೆ?" ಎಂದು ಪ್ರಶ್ನಿಸಿದೆ.
"ಬಂದರು, ಏರ್ಪೋರ್ಟ್, ಡಿಫೆನ್ಸ್ನಂತಹ ದೇಶದ ಸೂಕ್ಷ್ಮ ಕ್ಷೇತ್ರಗಳನ್ನು ಸಂಪೂರ್ಣ ಧನದಾಹಿ ಉದ್ಯಮಿಗಳ ತೆಕ್ಕೆಯಲ್ಲಿಟ್ಟು ದೇಶವನ್ನು ಅಭದ್ರತೆಗೆ ದೂಡುವ ಕೆಲಸ ಮಾಡುತ್ತಿದೆ ಬಿಜೆಪಿ ಸರ್ಕಾರ. ಎರಡು ಕಂಟೈನರ್ಗಳಲ್ಲಿ 21 ಸಾವಿರ ಕೋಟಿ ಮೌಲ್ಯದ ಹೆರಾಯಿನ್ ಭಾರತಕ್ಕೆ ತರುವಲ್ಲಿ ಮೋದಿ ಮಿತ್ರ ಅದಾನಿಯ ಪಾತ್ರದ ಬಗ್ಗೆ ತನಿಖೆ ಏಕಿಲ್ಲ?" ಎಂದು ಕೇಳಿದೆ.
"ಸಿಎಂ ಬಸವರಾಜ ಬೊಮ್ಮಾಯಿ ಅವರು ನೈತಿಕ ಪೊಲೀಸ್ಗಿರಿ ಸಹಿಸುವುದಿಲ್ಲ ಕಠಿಣ ಕ್ರಮ ಜರುಗಿಸುತ್ತೇವೆ ಎಂದಿದ್ದರು, ಆದರೆ ಪುತ್ತೂರಿನಲ್ಲಿ ಕಾರ್ಯನಿಮಿತ್ತ ಮಹಿಳೆಯೊಬ್ಬರು ತಮ್ಮ ಉದ್ಯೋಗಿಗಳೊಡನೆ ಉಳಿದಿದ್ದ ಲಾಡ್ಜ್ಗೆ ನುಗ್ಗಿ ಹಲ್ಲೆಗೈದವರ ವಿರುದ್ಧ ತುಟಿ ಬಿಚ್ಚದಿರುವುದೇಕೆ? ಭಯವೇ? ಮಹಿಳೆಯರಿಗೆ ರಕ್ಷಣೆ ನೀಡಲು ನಿಮ್ಮಿಂದಾಗುತ್ತದೆಯೋ ಇಲ್ಲವೋ ಹೇಳಿಬಿಡಿ" ಎಂದಿದೆ.