ಬೆಂಗಳೂರು, ಸೆ.22 (DaijiworldNews/PY): "ಆಧುನಿಕತೆ ನಾಗರೀಕತೆಯ ಇನ್ನೊಂದು ರೂಪ. ನಾಗರೀಕತೆ ಬೆಳೆದಂತೆ ಮನುಷ್ಯನ ಮನಸ್ಸು ವಿಕಾಸವಾಗಬೇಕು. ದುರದೃಷ್ಟವೆಂದರೆ, ನಾಗರೀಕತೆ ಬೆಳೆದಂತೆ ಮನುಷ್ಯನ ಮನಸ್ಸು ವಿಕಾಸವಾಗುವ ಬದಲು ವಿಕಾರವಾಗುತ್ತಿದೆ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೊಪ್ಪಳದ ದೇವಸ್ಥಾನವೊಂದಕ್ಕೆ ತಳ ಸಮುದಾಯದ ಮಗು ಪ್ರವೇಶ ಮಾಡಿದ ಕಾರಣಕ್ಕೆ ಪೋಷಕರಿಗೆ ದಂಡ ಹಾಕಿರುವುದು ಹಾಗೂ ಗುಬ್ಬಿ ತಾಲ್ಲೂಕಿನಲ್ಲಿ ಪ.ಜಾತಿಯವರಿಗೆ ದೇಗುಲ ಪ್ರವೇಶ ಮಾಡದಂತೆ ತಡೆದಿರುವುದು ಅಮಾನವೀಯ.ಈಗಲೂ ಅಸ್ಪೃಶ್ಯತೆ ಜೀವಂತವಾಗಿರುವುದು ನಾಚಿಕೆ ಪಡಬೇಕಾದ ವಿಷಯ.ಈ ಘಟನೆ ಎಲ್ಲರೂ ಸಮಾನರು ಎಂಬ ಸಂವಿಧಾನದ ಆಶಯವನ್ನೇ ಮಣ್ಣುಪಾಲು ಮಾಡಿದೆ" ಎಂದು ಕಿಡಿಕಾರಿದ್ದಾರೆ.
"ಆಧುನಿಕತೆ ನಾಗರೀಕತೆಯ ಇನ್ನೊಂದು ರೂಪ. ನಾಗರೀಕತೆ ಬೆಳೆದಂತೆ ಮನುಷ್ಯನ ಮನಸ್ಸು ವಿಕಾಸವಾಗಬೇಕು. ದುರದೃಷ್ಟವೆಂದರೆ, ನಾಗರೀಕತೆ ಬೆಳೆದಂತೆ ಮನುಷ್ಯನ ಮನಸ್ಸು ವಿಕಾಸವಾಗುವ ಬದಲು ವಿಕಾರವಾಗುತ್ತಿದೆ. ಇದರ ಪ್ರತಿರೂಪವೇ ಇಂತಹ ಅಮಾನವೀಯ ಅಸ್ಪೃಶ್ಯತೆಯ ಆಚರಣೆ. ಇಂತಹ ಅಮಾನವೀಯ ಆಚರಣೆ ಕೊನೆಯಾಗದಿದ್ದರೆ ನಾವು ವಿಶ್ವಮಾನವರಾಗುವುದು ಹೇಗೆ?" ಎಂದು ಪ್ರಶ್ನಿಸಿದ್ದಾರೆ.
"ಶತ ಶತಮಾನಗಳಿಂದಲೂ ಬೇರೂರಿರುವ ಅಸ್ಪೃಶ್ಯತೆಯಂತಹ ಸಾಮಾಜಿಕ ಮೌಢ್ಯಗಳನ್ನು ತೊಡೆದು ಹಾಕಲು ಬುದ್ಧ, ಬಸವಣ್ಣ, ಅಂಬೇಡ್ಕರ್ರಂತಹ ಮಹಾಮಹೀಮರು ಹೋರಾಡಿದ್ದಾರೆ. ಆದರೂ ಈ ಮೌಢ್ಯಗಳು ಈಗಲೂ ಸಮಾಜದ ಭಾಗವಾಗಿರುವುದು ದುರಂತ. ಅಸ್ಪೃಶ್ಯತೆ ಒಂದು ಸಾಮಾಜಿಕ ರೋಗ.ಈ ರೋಗದ ವಿರುದ್ಧ ಹೋರಾಡಲು ಕೇವಲ ಕಾನೂನಿನ ಬಲ ಸಾಲದು, ಜೊತೆಗೆ ವೈಚಾರಿಕ ಹೋರಾಟವೂ ಬೇಕಾಗಿದೆ" ಎಂದಿದ್ದಾರೆ.