ಕಾಶ್ಮೀರ, ಸೆ.22 (DaijiworldNews/PY): ದೇವಾಲಯದ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ್ದ ಪೊಲೀಸ್ ಕಾನ್ಸ್ಟೇಬಲ್ ಅನ್ನು ದೇಶ ವಿರೋಧಿ ಆಗಂತುಕ ಎಂದು ತಪ್ಪಾಗಿ ಭಾವಿಸಿ ನಡೆಸಿದ ಗುಂಡಿನ ದಾಳಿಗೆ ಮೃತಪಟ್ಟ ಘಟನೆ ಕಾಶ್ಮೀರದ ದೇವಾಲಯದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ಕಾನ್ಸ್ಟೇಬಲ್ ಅನ್ನು ಹಂದ್ವಾರಾ ಲಂಗೇಟ್ ನಿವಾಸಿ ಅಜಯ್ ಧಾರ್ ಎಂದು ಗುರುತಿಸಲಾಗಿದೆ.
"ಕಾನ್ಸ್ಟೇಬಲ್ ಅಜಯ್ ಧಾರ್ ಸೆ.21ರ ಮಂಗಳವಾರ ದೇವಾಲಯದ ಬಾಗಿಲನ್ನು ಬಡಿದು, ಒಳ ಹೋಗಲು ಯತ್ನಿಸಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು" ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ಧಾರೆ.
"ಗಾಳಿಯಲ್ಲಿ ಗುಂಡು ಹಾರಿಸಿದ ಬಳಿಕವೂ ಕಾನ್ಸ್ಟೇಬಲ್ ತನ್ನ ಗುರುತನ್ನು ಬಹಿರಂಗಪಡಿಸದೇ ಬಾಗಿಲು ಬಡಿಯುತ್ತಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರು. ಇದು ನಿಜಕ್ಕೂ ಗುರುತನ್ನು ತಪ್ಪಾಗಿ ಪರಿಣಿಸಿದ ಘಟನೆಯಾಗಿದೆ" ಎಂದು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ಹೇಳಿದ್ದಾರೆ.