ಲಕ್ನೋ, ಸೆ 22 (DaijiworldNews/MS): " ಬೃಹತ್ ಮತಾಂತರ ಜಾಲ " ವನ್ನು ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮಂಗಳವಾರ ಮೀರತ್ನಲ್ಲಿ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಕಲೀಂ ಸಿದ್ದಿಕಿಯನ್ನು ಬಂಧಿಸಿದೆ.
ಉತ್ತರ ಪ್ರದೇಶದ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ), ಪ್ರಶಾಂತ್ ಕುಮಾರ್ ಪ್ರಕಾರ, ಎಟಿಎಸ್ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಮೌಲಾನಾ ಕಲೀಂ ಸಿದ್ದಿಕಿ ಅವರನ್ನು ಬಂಧಿಸಿದೆ. ಉತ್ತರ ಪ್ರದೇಶ ಪೊಲೀಸರು ಈ ಹಿಂದೆ ಅಂದರೆ, ಜೂನ್ 20 ರಂದು ಮುಫ್ತಿ ಖಾಜಿ ಜಹಾಂಗೀರ್ ಆಲಂ ಕಾಸ್ಮಿ ಮತ್ತು ಮೊಹಮ್ಮದ್ ಉಮರ್ ಗೌತಮ್ ಎಂಬಿಬ್ಬರನ್ನು ದೆಹಲಿಯ ಜಾಮಿಯಾ ನಗರ ಪ್ರದೇಶದಿಂದ ಬಂಧಿಸಿದ್ದರು. ಇಬ್ಬರೂ ಇಸ್ಲಾಮಿಕ್ ದವಾಹ್ ಸೆಂಟರ್ ಅನ್ನು ನಡೆಸುತ್ತಿದ್ದರು, ಕಿವುಡ-ಮೂಕ ವಿದ್ಯಾರ್ಥಿಗಳನ್ನು ಇಸ್ಲಾಂ ಧರ್ಮಕ್ಕೆ ಪರಿವರ್ತಿಸಲು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ನಿಂದ ಹಣವನ್ನು ಪಡೆದಿದ್ದಾರೆ ಎಂದು ಆರೋಪವಿದೆ. ತನಿಖೆಗೆ ಸಂಬಂಧಿಸಿದಂತೆ ಎಟಿಎಸ್ ಇದುವರೆಗೆ ಸಿದ್ದಿಕಿ ಹೊರತುಪಡಿಸಿ 10 ಜನರನ್ನು ಬಂಧಿಸಿದೆ .ಈ ಪ್ರಕರಣದ ತನಿಖೆ ಮಾಡುತ್ತಿರುವಾಗ ಮೌಲಾನಾ ಕಲೀಂ ಸಿದ್ದಿಕಿ ಹೆಸರನ್ನು ಪತ್ತೆ ಮಾಡಿತು" ಎಂದು ಪ್ರಶಾಂತ್ ಕುಮಾರ್ ವಿವರಿಸಿದ್ದಾರೆ .
64 ವರ್ಷದ ಮೌಲಾನಾ ಸಿದ್ದಿಖಿಯ ಸಂಶಯಾಸ್ಪದ ಚಟುವಟಿಕೆ ಮೇಲೆ ಭದ್ರತಾ ಏಜೆನ್ಸಿ ತೀವ್ರ ನಿಗಾ ಇಟ್ಟಿತ್ತು. ಮೌಲಾನಾ ಕಲೀಂ ಸಿದ್ದಿಕಿ ಉತ್ತರ ಪ್ರದೇಶದ ಮುಜಾಫರ್ ನಗರ ಫುಲತ್ ನ ನಿವಾಸಿಯಾಗಿದ್ದು ಇಸ್ಲಾಮಿಕ ಮೌಲ್ವಿ ಸಿದ್ದಿಖಿ ಜಾಮೀಯಾ ಇಮಾಂ ವಲಿಯುಲ್ಲಾ ಟ್ರಸ್ಟ್ ಅನ್ನು ನಡೆಸುತ್ತಿದ್ದ. ಟ್ರಸ್ಟ್ ಗೆ ವಿದೇಶದಿಂದ ಭಾರೀ ಪ್ರಮಾಣದ ಹಣ ಬರುತ್ತಿದ್ದು ಟ್ರಸ್ಟ್ ಮೂಲಕ ಹಲವಾರು ಮದರಸಾಗಳಿಗೆ ಧನಸಹಾಯ ಮಾಡುತ್ತಿದ್ದ ಎನ್ನಲಾಗಿದೆ. ಮಾತ್ರವಲ್ಲದೆ ಕೋಮು ಸೌಹಾರ್ದತೆ" ಕಾರ್ಯಕ್ರಮಗಳ ನೆಪದಲ್ಲಿ ಅಕ್ರಮ ಧಾರ್ಮಿಕ ಮತಾಂತರಗಳನ್ನು ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಮೌಲಾನಾ ಕಲೀಂ ಸಿದ್ದಿಕಿ ಕಳೆದ ವರ್ಷ ಬಾಲಿವುಡ್ ತೊರೆದಿದ್ದ ನಟಿ ಸನಾ ಖಾನ್ ಮತ್ತು ಗುಜರಾತ್ ಮೂಲದ ಧಾರ್ಮಿಕ ವಿದ್ವಾಂಸ ಮುಫ್ತಿ ಅನಸ್ ಸೈಯದ್ ವಿವಾಹದಲ್ಲಿ ಪಾಲ್ಗೊಂಡಿದ್ದರು ವಿಡಿಯೋದಲ್ಲಿ ಎಂದು ತಿಳಿದುಬಂದಿದೆ.