ನವದೆಹಲಿ, ಸೆ 22 (DaijiworldNews/MS): ನವೆಂಬರ್ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ ನೀಡಲೇಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಮುಂದಿನ ವರ್ಷದಿಂದ ಮಹಿಳಾ ಅಭ್ಯರ್ಥಿಗಳು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪ್ರವೇಶ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡುವ ಕೇಂದ್ರದ ಕೋರಿಕೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಮಹಿಳೆಯರ ಹಕ್ಕನ್ನು ನಿರಾಕರಿಸುವುದನ್ನು ಸುಪ್ರಿಂ ಕೋರ್ಟ್ ಬಯಸುವುದಿಲ್ಲ ಎಂದು ಹೇಳಿದೆ. ಹೀಗಾಗಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಮಹಿಳೆಯರ ಪ್ರವೇಶದ ಪರೀಕ್ಷೆಯನ್ನು ಒಂದು ವರ್ಷ ಮುಂದೂಡಲಾಗುವುದಿಲ್ಲ ಎಂದು ಅದು ಹೇಳಿದೆ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಮಹಿಳಾ ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಅವಕಾಶ ನೀಡುವ ಅಧಿಸೂಚನೆಯು ಮುಂದಿನ ವರ್ಷದ ಮೇ ವೇಳೆಗೆ ಹೊರಬೀಳಲಿದೆ ಎಂದು ಕೇಂದ್ರವು ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.
ನ್ಯಾಯಮೂರ್ತಿ ಎಸ್ ಕೆ ಕೌಲ್ ನೇತೃತ್ವದ ನ್ಯಾಯಪೀಠವು ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಶಸ್ತ್ರ ಪಡೆಗಳು ಅತ್ಯುತ್ತಮ ಪ್ರತಿಕ್ರಿಯಾ ತಂಡವಾಗಿದ್ದು, ವಿಳಂಬವಿಲ್ಲದೆ ಎನ್ಡಿಎಗೆ ಮಹಿಳೆಯರ ಸೇರ್ಪಡೆಗೆ ದಾರಿ ಮಾಡಿಕೊಡಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಆಶಿಸಿದರು.
ಮಹಿಳೆಯರಿಗೆ ಈ ವರ್ಷದಿಂದಲೇ ಎನ್ಡಿಎ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು. ಇದನ್ನು ಒಂದು ವರ್ಷಗಳ ಕಾಲ ಮುಂದುವರಿಸಲು ಸಾಧ್ಯವೇ ಇಲ್ಲ. ನವೆಂಬರ್ನಲ್ಲಿ ನಡೆಯಲಿರುವ ಪರೀಕ್ಷೆಗೆ ಪರಿಷ್ಕೃತ ಅಧಿಸೂಚನೆ ಹೊರಡಿಸಬೇಕು. ಇದಕ್ಕಾಗಿ ಯುಪಿಎಸ್ಸಿಯ ಸಹಯೋಗದೊಂದಿಗೆ ರಕ್ಷಣಾ ಇಲಾಖೆಯಿಂದ ಅಗತ್ಯವಾದ ಕೆಲಸಗಳನ್ನು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.