ಬೆಂಗಳೂರು, ಸೆ.22 (DaijiworldNews/PY): "ರಾಜ್ಯದಲ್ಲಿ ಮೂರು ಹಂತದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗುವುದು" ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ವಿಧಾನ ಪರಿಷತ್ನಲ್ಲಿ ಪ್ರಶ್ನೋತ್ತರ ಕಲಾಪದ ಸಂದರ್ಭ ಕಾಂಗ್ರೆಸ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುನೀಲ್ ಕುಮಾರ್, "ರಾಜ್ಯದಲ್ಲಿ ಮೂರು ಹಂತದಲ್ಲಿ ಸ್ಮಾರ್ಟ್ ಹಾಗೂ ಪ್ರೀ ಪೇಡ್ ವಿದ್ಯುತ್ ಮೀಟರ್ ಅಳವಡಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರಿ ಕಚೇರಿಗಳಿಗೆ ಮೊದಲ ಹಂತದಲ್ಲಿ. ಎರಡನೇ ಹಂತದಲ್ಲಿ ಹೊಸ ಕಟ್ಟಡ ನಿರ್ಮಾಣದ ಸಂದರ್ಭ ಪಡೆದುಕೊಳ್ಳುವವರಿಗೆ ಹಾಗೂ ಮೂರನೇಯದಾಗಿ 27 ಅಮೃತ ಸಿಟಿಗಳಿಗೆ ಈ ಯೋಜನೆಯನ್ನು ಅಳವಡಿಕೆ ಮಾಡಿಕೊಳ್ಳಲಾಗುವುದು" ಎಂದಿದ್ದಾರೆ.
"ಯಾವುದೇ ಕಾರಣಕ್ಕೂ ಕೃಷಿ ಪಂಪ್ ಸೆಟ್ಗಳಿಗೆ ಸ್ಮಾರ್ಟ್ ಮೀಟರ್, ಪ್ರೀಪೇಡ್ ಮೀಟರ್ಗಳನ್ನು ಅಳವಡಿಕೆ ಮಾಡಲಾಗುವುದಿಲ್ಲ" ಎಂದು ತಿಳಿಸಿದ್ದಾರೆ.
"ಟ್ರಾನ್ಸ್ ಫಾರ್ಮರ್ ಸುಟ್ಟು ಹೋದಲ್ಲಿ 24 ಗಂಟೆಯಲ್ಲಿ ಬದಲಾಯಿಸಿಕೊಡಲು ಸರ್ಕಾರ ಅಗತ್ಯವಾದ ಕ್ರಮ ಕೈಗೊಳ್ಳಲಿದೆ" ಎಂದು ಹೇಳಿದ್ದಾರೆ.