ಬೆಂಗಳೂರು, ಸೆ 22 (DaijiworldNews/MS): ಆಪರೇಷನ್ ಹಸ್ತದ ವದಂತಿ ಸುದ್ದಿ ಕೇಳಿಬರುತ್ತಿರುವುದರ ನಡುವೆ ಬುಧವಾರ ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ನಿವಾಸದಲ್ಲಿ ಬಿಜೆಪಿ ಶಾಸಕರು ಮತ್ತು ಸಚಿವರಿಗೆ ಭೋಜನ ಕೂಟ ಏರ್ಪಡಿಸಿದ್ದಾರೆ. ಬಿಜೆಪಿಯ 20 ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿಯ ನಡುವೆ ಸಿಎಂ ಏರ್ಪಡಿಸಿರುವ ಭೋಜನ ಕೂಟಕ್ಕೆ ಮಹತ್ವದ ಬಂದಿದೆ.
ಸರ್ಕಾರದಿಂದ ಸರಿಯಾಗಿ ಅನುದಾನ ಬಿಡುಗಡೆ ಇಲ್ಲ, ತಮ್ಮನ್ನು ಕಡೆಗಣಿಸಲಾಗುತ್ತಿದೆ, ಹೀಗೆ ಅಸಮಾಧಾನ, ಸಮಸ್ಯೆಗಳು ಬಿಜೆಪಿ ಶಾಸಕರನ್ನು ಕಾಡುತ್ತಿರುವ ಹಿನ್ನಲೆ ಆಪರೇಷನ್ ಹಸ್ತಕ್ಕೆ ಇವರು ಸಿಲುಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ನಡುವೆ ಮಂಗಳವಾರ ಬೆಳಗ್ಗೆ ಶಾಸಕಾಂಗ ಸಭೆ ಏರ್ಪಡಿಸಿದ್ದ ಮುಖ್ಯಮಂತ್ರಿಗಳು ಇಂದು ಸಾಯಂಕಾಲ ಭೋಜನ ಕೂಟ ಏರ್ಪಡಿಸಿದ್ದು ಎಲ್ಲಾ ಬಿಜೆಪಿ ಶಾಸಕರುಗಳನ್ನು ಆಹ್ವಾನಿಸಿದ್ದಾರೆ. ಶಾಸಕರ ಎಲ್ಲಾ ಕೆಲಸಗಳನ್ನು ಮಾಡಿಕೊಡುವ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸ ರೇಸ್ ವ್ಯೂ ಕಾಟೇಜ್ ನಲ್ಲಿ ಸಂಜೆ 7 ಗಂಟೆಗೆ ಔತಣಕೂಟ ಆಯೋಜಿಸಲಾಗಿದೆ. ಡಿನ್ನರ್ ಪಾರ್ಟಿಯ ನೆಪದಲ್ಲಿ ಶಾಸಕರನ್ನು ಮುಖತಃ ಭೇಟಿ ಮಾಡಿ ಅವರ ಜೊತೆ ಚರ್ಚೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಯೋಚನೆಯಲ್ಲಿ ಸಿಎಂ ಇದ್ದಾರೆ ಎಂದು ಹೇಳಲಾಗುತ್ತಿದೆ.