ಬೆಂಗಳೂರು, ಸೆ.22 (DaijiworldNews/PY): "ನಾಗರಿಕರು ಲಸಿಕೆ ಪಡೆಯಲೇಬೇಕು ಎಂದು ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಈ ವಿಚಾರವಾಗಿ ಜನರ ಮನವೊಲಿಸಿ ಕ್ರಮ ಕೈಗೊಳ್ಳಲಾಗುವುದು" ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಿಸಲು ಅವಶ್ಯಕವಾದ ಕ್ರಮ ತೆಗೆದುಕೊಳ್ಳಲಾಗುವುದು. ಹಾಗಾಗಿ ನಗರದಲ್ಲಿ ಸರಾಸರಿ 350-400 ಕೊರೊನಾ ಪ್ರಕರಣಗಳು ಮಾತ್ರ ಪತ್ತೆಯಾಗಿವೆ" ಎಂದಿದ್ದಾರೆ.
"ಶಾಲಾ-ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿವೆ. ಅಲ್ಲದೇ, ಪೂರ್ಣಪ್ರಮಾಣದಲ್ಲಿ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗಿವೆ. ಇದರ ಮಧ್ಯೆಯೂ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಜನರು ಕೊರೊನಾ ಲಸಿಕೆ ಪಡೆಯುವುದರೊಂದಿಗೆ ಕೊರೊನಾ ನಿಯಮಗಳನ್ನು ಕೂಡಾ ಕಡ್ಡಾಯವಾಗಿ ಪಾಲಿಸಬೇಕು. ಅಲ್ಲದೇ, ಕೊರೊನಾ ಸೋಂಕನ್ನು ನಿಯಂತ್ರಿಸಲು ನೆರವಾಗಬೇಕು" ಎಂದು ತಿಳಿಸಿದ್ದಾರೆ.
"ತಜ್ಞರ ತಂಡವು, ಕೊರೊನಾನಿಂದ ಸಂಭವಿಸಿದ ಸಾವುಗಳ ಲೆಕ್ಕಪರಿಶೋಧನಾ ವರದಿಯನ್ನು ತಯಾರಿಸುತ್ತಿದೆ" ಎಂದಿದ್ದಾರೆ.