ನವದೆಹಲಿ, ಸೆ 22 (DaijiworldNews/MS): ಕೊವೀಡ್ ಲಸಿಕೆ ಕೋವಿಶೀಲ್ಡ್ ಮಾನ್ಯತೆ ನೀಡದೆ ಇರುವ ಬ್ರೀಟಿಷ್ ಸರ್ಕಾರ, ಭಾರತ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದು ಇದೊಂದು ತಾರತಮ್ಯದ ದೋರಣೆ ಎಂದಿದೆ.
ಭಾರತೀಯರು ಬ್ರಿಟನ್ಗೆ ಹೋದಾಗ 10 ದಿನಗಳ ಕಡ್ಡಾಯ ಕ್ವಾರಂಟೈನ್ ನಿಯಮ ಕೈಬಿಡದಿದ್ದರೆ ಅದಕ್ಕೆ ತಿರುಗೇಟು ನೀಡುವಂತಹ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗ್ಲಾ ಮಂಗಳವಾರ ಹೇಳಿದ್ದಾರೆ. ಇದು ತಾರತಮ್ಯದಿಂದ ಕೂಡಿದ ನಿಯಮ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಎಲಿಜಬೆತ್ ಟ್ರಸ್ ಅವರ ಜತೆಗೂ ಈ ವಿಷಯ ಪ್ರಸ್ತಾಪಿಸಿದ್ದಾರೆ. ಇವರಿಬ್ಬರೂ ನ್ಯೂಯಾರ್ಕ್ನಲ್ಲಿ ಭೇಟಿಯಾಗಿದ್ದಾರೆ. ಕೋವಿಶೀಲ್ಡ್ನ ಲಸಿಕೆಯ ಎರಡೂ ಡೋಸ್ ಪಡೆದುಕೊಂಡಿದ್ದರೂ ಅಂಥವರನ್ನು ಲಸಿಕೆ ಹಾಕಿಸಿಕೊಳ್ಳದವರು ಎಂದೇ ಪರಿಗಣಿಸುವ ನಿಯಮವನ್ನು ಬ್ರಿಟನ್ ರೂಪಿಸಿದೆ. ಚರ್ಚೆಯ ಬಳಿಕ ಎಲಿಜಬೆತ್ ಟ್ರಸ್ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದಿದ್ದಾರೆ.
ವಿದೇಶಿ ಪ್ರವಾಸಿಗರಿಗೆ ಸಂಬಂಧಿಸಿದ ಹೊಸ ನಿಯಮಗಳು ಅಕ್ಟೋಬರ್ 4ರಿಂದ ಜಾರಿಗೆ ಬರಲಿವೆ. ಲಸಿಕೆಯ ನಿಯಮವನ್ನು ಅದರೊಳಗೆ ಸರಿಪಡಿಸಬೇಕು ಎಂದು ಭಾರತ ಒತ್ತಾಯಿಸಿದೆ.