ಬೆಂಗಳೂರು,ಸೆ. 21 (DaijiworldNews/SM): ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಕಾನೂನು ಮೀರಿರುವ ಆರೋಪ ಎದುರಿಸುತ್ತಿರುವ ಐಎ ಎಸ್ ಅಧಿಕಾರಿ ರೋಹಿಣಿ ಸಿಂದೂರಿಯವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದರೆ.
ವಿಧಾನಸಭೆಯ ಶೂನ್ಯವೇಳೆಯಲ್ಲಿಂದು ಸಾ. ರಾ ಮಹೇಶ್ ಅವರು ಮಂಡಿಸಿದ್ದ ಹಕ್ಕು ಚ್ಯುತಿ ಪ್ರಸ್ತಾಪಕ್ಕೆ ಸಚಿವರು ಉತ್ತರ ನೀಡಿದರು. ಈ ವಿಚಾರದಲ್ಲಿ ಸರ್ಕಾರ ಅಂದಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಕ್ರಮ ತೆಗೆದುಕೊಳ್ಳಲಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಸರ್ಕಾರದ ಅಧಿಕಾರಿಗಳು ತಮ್ಮ ಅಧಿಕಾರದ ಮಿತಿಯೊಳಗೆ ಅಧಿಕಾರಿಗಳಾಗಿಯೇ ಕೆಲಸ ಮಾಡಬೇಕು. ಯಾರೂ ಕೂಡ ಸರ್ವಾಧಿಕಾರಿಗಳಾಗಬಾರದು. ಇದನ್ನೂ ಸರಕಾರ ಸಹಿಸುವುದಿಲ್ಲ ಎಂದು ಸಚಿವರು ಸದನದಿಂದಲೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕಾನೂನು ಉಲ್ಲಂಘನೆಯನ್ನು ಯಾರೇ ಮಾಡಿದ್ದರೂ ಅದು ಸಮರ್ಥಿಸಿಕೊಳ್ಳಲು ಅಸಾಧ್ಯ. ಅಧಿಕಾರಿ ತನ್ನ ಅಧಿಕಾರದ ವ್ಯಾಪ್ತಿ ಮೀರಿ ವರ್ತನೆ ಮಾಡಿದರೆ ಅವರ ವಿರುದ್ಧ ಕ್ರಮಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದರು.
ಕೆಆರ್ ನಗರ ಶಾಸಕ ಸಾರಾ ಮಹೇಶ್ ಅವರು, ರೋಹಿಣಿ ಸಿಂಧೂರಿ ಅವರು 30 ಲಕ್ಷಕ್ಕೆ ಈಜು ಕೊಳ ನಿರ್ಮಾಣ ಮಾಡಿರುವುದು ಮತ್ತು 15 ಲಕ್ಷಕ್ಕೆ ಕಚೇರಿ ನವೀಕರಣ ಮಾಡಿರುವ ಫೋಟೋಗಳನ್ನು ಸದನದ ಗಮನಕ್ಕೆ ತಂದರು. ಅಲ್ಲದೆ, ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸಿಂಧೂರಿ ಸರ್ವಾಧಿಕಾರಿಯಾಗಿದ್ದರು ಎಂಬುವುದನ್ನು ಕೂಡ ಸದನಕ್ಕೆ ತಿಳಿಸಿದರು.