ನವದೆಹಲಿ, ಸೆ. 21 (DaijiworldNews/SM): ಕೊರೋನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಭಾರತ ಹಾಗೂ ಕೆನಡಾ ನಡುವಿನ ವಿಮಾನ ಸೇವೆ ಇದೀಗ ಬರೋಬ್ಬರಿ ಐದು ತಿಂಗಳ ಬಳಿಕ ಆರಂಭಗೊಂಡಿದೆ.
ಕೆನಡಾದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ ಏರ್ ಕೆನಡಾ, ಸುಮಾರು 5 ತಿಂಗಳ ಬಳಿಕ ಇದೀಗ ಭಾರತ ಹಾಗೂ ಕೆನಡಾ ನಡುವೆ ವಿಮಾನ ಹಾರಾಟಕ್ಕೆ ಅನುಮತಿ ನೀಡಿದೆ.
ಭಾರತ ಹಾಗೂ ಕೆನಡಾ ನಡುವೆ ಹಾರಾಟ ನಡೆಸುವ ವಿಮಾನ ದೆಹಲಿ ಹಾಗೂ ಟಿರೊಂಟೊ ನಡುವೆ ಹೊಸ ಮಾರ್ಗಸೂಚಿಗಳೊಂದಿಗೆ ಹಾರಾಟ ನಡೆಸಲಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದಿತ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗಷ್ಟೇ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ 18 ಗಂಟೆಗಳೊಳಗೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಿರುವ ನೆಗೆಟಿವ್ ವರದಿ ಅಗತ್ಯವಾಗಿದೆ.
ಏಪ್ರಿಲ್ 23ರಿಂದ ಕೆನಡಾ ಭಾರತ ನಡುವೆ ವಿಮಾನ ಹಾರಾಟಕ್ಕೆ ಬ್ರೇಕ್ ಬಿದ್ದಿತ್ತು. ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ವಿಮಾನ ಹಾರಾಟಕ್ಕೆ ನಿಷೇಧ ವಿಧಿಸಲಾಗಿತ್ತು. ಈ ನಿರ್ಬಂಧ ಸೆಪ್ಟೆಂಬರ್ 21ರವರೆಗೆ ಮುಂದುವರೆದಿತ್ತು.
ಕೋವಿಡ್ 19 ಮೂರನೇ ಭೀತಿ ಹಿನ್ನೆಲೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ್ತೊಂದೆಡೆ ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸೆ.30ವರೆಗೆ ರದ್ದುಗೊಳಿಸಲಾಗಿದೆ.