ಬೆಂಗಳೂರು, ಸೆ 21(DaijiworldNews/MS): ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಅವರು ಕರಾವಳಿಯಲ್ಲಿ ಆಗ್ಗಾಗ್ಗೆ ಸುದ್ದಿಯಾಗುತ್ತಿರುವ, ಸ್ಯಾಟಲೈಟ್ ಫೋನ್ ಬಳಕೆಯ ಅನುಮಾನದ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಯು.ಟಿ ಖಾದರ್ ಈ ವಿಚಾರ ಪ್ರಸ್ತಾಪಿಸಿ, ನಿಷೇಧಿತ ಸ್ಯಾಟಲೈಟ್ ಫೋನ್ ಕರಾವಳಿಯಲ್ಲಿ ಬಳಕೆ ಮಾಡುತ್ತಿರುವ ಬಗ್ಗೆ ಆಗಾಗ್ಗೆ ವರದಿಯಾಗುತ್ತಿದೆ. ಇದರಿಂದ ಜನತೆ ಗೊಂದಲಕ್ಕೊಳಗಾಗುತ್ತಿದ್ದಾರೆ. ಒಂದು ವರ್ಷದ ಹಿಂದೆಯೂ ಸ್ಯಾಟಲೈಟ್ ಫೋನ್ ಬಳಕೆ ಬಗ್ಗೆ ಸದ್ದಾಗಿತ್ತು. ಬೆಳ್ತಂಗಡಿಯ ಯುವಕನೊಬ್ಬನ ಸುಖಾಸುಮ್ಮನೆ ಸಂಶಯಿಸಲಾಗಿತ್ತು. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ ಅಧಿಕೃತ ಹೇಳಿಕೆಯನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರಿಸಿ ಕರಾವಳಿ ಭಾಗದಲ್ಲಿ ’ತುರಾಯಾ’ಸ್ಯಾಟಲೈಟ್ ಫೋನ್ ಬಳಕೆ ಬಗ್ಗೆ ಮಾಧ್ಯಮಗಳ ವರದಿ ಗಮನಿಸಿದ್ದೇನೆ. ಗಾಬರಿ ಬೇಡ , ಇದರ ಮೇಲೆ ನಿಗಾ ಇಡುವ ದೃಷ್ಟಿಯಿಂದ ಗುಪ್ತಚರ ಇಲಾಖೆಯ ಜೊತೆ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.