ಬೆಂಗಳೂರು, ಸೆ.21 (DaijiworldNews/HR): ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಚಿವ ನಿರಾಣಿ, "ನನ್ನ ಟ್ವಿಟರ್ ಖಾತೆ @NiraniMurugesh ಯನ್ನು ಕೆಲವರು ಇಂದು ಅಜ್ಞಾತ ವಿದೇಶಿ ಸ್ಥಳದಿಂದ ಹ್ಯಾಕ್ ಮಾಡಲಾಗಿದ್ದು, ಆರೋಪಿಗಳ ನಿಖರವಾದ ಮೂಲ ಮತ್ತು ಗುರುತು ನಮಗೆ ತಿಳಿದಿಲ್ಲ" ಎಂದು ತಿಳಿಸಿದ್ದಾರೆ.
ಇನ್ನು ಹ್ಯಾಕರ್ಗಳು ಪೋಸ್ಟ್ ಮಾಡುವ ಯಾವುದೇ ಮೋಸದ ಸಂದೇಶಗಳಿಗೆ ಬಲಿಯಾಗಬೇಡಿ. ನನ್ನ ಖಾತೆಯಲ್ಲಿರುವ ಯಾವುದೇ ಅವಹೇಳನಕಾರಿ ಮತ್ತು ಅಸಂಸದೀಯ ಸಂದೇಶಗಳನ್ನು ನಿರ್ಲಕ್ಷಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಟ್ವಿಟರ್ ಗೆ ದೂರು ನೀಡಿದ್ದು, ಶೀಘ್ರದಲ್ಲೇ ಬೆಂಗಳೂರಿನ ಸೈಬರ್ ಸೆಲ್ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆ.