ಕೊಪ್ಪಳ, ಸೆ 21(DaijiworldNews/MS): ದಲಿತ ಸಮುದಾಯದ ಮಗುವೊಂದು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು ದಂಡ ವಿಧಿಸಿ ದೇವಸ್ಥಾನ ಶುದ್ದೀಕರಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಊರಿನಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ ಎಂದು ದಲಿತ ಪರ ಸಂಘಟನೆಗಳು ಆರೋಪಿಸಿದೆ.
ಸೆಪ್ಟೆಂಬರ್ 4 ರಂದು ಈ ಘಟನೆ ನಡೆದಿದ್ದು ಚನ್ನದಾಸರ ಸಮುದಾಯದ ಮಗುವೊಂದು ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಹೋಗಿತ್ತು ಎನ್ನಲಾಗಿದೆ. ಅಂದು ಮಗುವಿನ ಜನ್ಮದಿನದ ಹಿನ್ನೆಲೆ ಮಗು ದೇವಸ್ಥಾನಕ್ಕೆ ಹೋಗಿತ್ತು ಎನ್ನಲಾಗಿದೆ. ಇದು ಸವರ್ಣೀಯರ ಗಮನಕ್ಕೆ ಬಂದು ಸೆಪ್ಟೆಂಬರ್ 11 ರಂದು ಸಭೆ ನಡೆಸಿ ದಲಿತರು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಅಪವಿತ್ರವಾಗಿದೆ ಎಂದು ಶುದ್ದಿಕರಿಸಿ, 11 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಇದನ್ನು ಸಮುದಾಯದ ಮಂದಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.
ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ದಂಡ ವಿಧಿಸಿದವರಿಗೆ ಎಚ್ಚರಿಕೆ ನೀಡಿ, ಗ್ರಾಮಸ್ಥರಿಗೆ ತಿಳಿವಳಿಕೆ ಹೇಳಿದ್ದಾರೆ. ಆದರೆ ಘಟನೆ ಬಳಿಕ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಕರಣವನ್ನು ದಾಖಲಿಸಿಕೊಳ್ಳದೇ ಸುಮ್ಮನಿರುವುದು ಸರಿಯಲ್ಲ ಎಂದು ದಲಿತ ಪರ ಸಂಘಟನೆಗಳು ಒತ್ತಾಯಿಸಿದ್ದಾರೆ.