ಪಾಟ್ನಾ, ಸೆ.21 (DaijiworldNews/HR): ಪ್ರಿಯಕರನ ಜೊತೆ ಸೇರಿ ಮಹಿಳೆಯೊಬ್ಬಳು ತನ್ನ ಗಂಡನನ್ನು ಹತ್ಯೆಗೈದು ಆತನ ಶವವನ್ನು ರಾಸಾಯನಿಕ ಬಳಸಿ ವಿಲೇವಾರಿ ಮಾಡಲು ಯತ್ನಿಸಿದ ಘಟನೆ ಬಿಹಾರ ರಾಜ್ಯದ ಮುಜಾಫರ್ ಪುರ್ನ ಸಿಕಂದರ್ಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಕೇಶ್(30 ) ಎಂಬಾತ ತನ್ನ ಪತ್ನಿ ರಾಧಾಳಿಂದ ಹತ್ಯೆಗೊಳಗಾದ ವ್ಯಕ್ತಿ.
ರಾಕೇಶ್ ಪತ್ನಿ ರಾಧಾ, ಆಕೆಯ ಪ್ರಿಯಕರ ಸುಭಾಷ್, ರಾಧಾ ಸಹೋದರಿ ಕೃಷ್ಣಾ, ಮತ್ತು ಆಕೆಯ ಪತಿ ಆರೋಪಿಗಳು.
ಮೃತ ದೇಹವನ್ನು ಸುಭಾಷ್ ಹಲವಾರು ತುಂಡುಗಳಾಗಿ ಕತ್ತರಿಸಿದ್ದು, ಸುಭಾಷ್ ಮತ್ತು ರಾಧಾ ಬಾಡಿಗೆ ಫ್ಲಾಟ್ ಒಳಗೆ ಶವವನ್ನು ವಾಸನೆ ಬಾರದಂತೆ ತಡೆಯಲು ರಾಸಾಯನಿಕವನ್ನು ಬಳಸಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ರಾಸಾಯನಿಕ ಸ್ಫೋಟಕ್ಕೆ ಕಾರಣವಾಗಿದೆ ಎಂದು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇನ್ನು ಪೊಲೀಸರು ಫ್ಲಾಟ್ ಗೆ ಬಂದು ನೋಡಿದಾಗ ಶವದ ತುಂಡುಗಳನ್ನು ಚದುರಿದ್ದು, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು ಮತ್ತು ವಿಧಿವಿಜ್ಞಾನ ತಂಡವು ಈ ಬಗ್ಗೆ ತನಿಖೆ ಪ್ರಾರಂಭಿಸಿದೆ.
ರಾಕೇಶ್ ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದು, ಆತನ ಮೇಲೆ ಪೊಲೀಸರ ಕಣ್ಣಿತ್ತು. ಹೀಗಾಗಿ ಆತ ಪತ್ನಿಯನ್ನು ಮನೆಯಲ್ಲಿಟ್ಟು ಬೇರೆ ಕಡೆ ರಹಸ್ಯವಾಗಿ ನೆಲೆಸಿದ್ದ. ಆತನ ಪಾರ್ಟ್ನರ್ ಸುಭಾಶ್, ರಾಧಾರರನ್ನು ನೋಡಿಕೊಳ್ಳುತ್ತಿದ್ದ. ಈ ವೇಳೆ ರಾಧಾ ಮತ್ತು ಸುಭಾಶ್ ನಡುವೆ ಪ್ರೀತಿ ಬೆಳೆದಿತ್ತು. ಇದಕ್ಕೆ ರಾಧಾ ಸಹೋದರಿ ಮತ್ತು ಆಕೆಯ ಗಂಡನ ಸಹಕಾರವೂ ದೊರೆತಿದ್ದು ತಮ್ಮ ದಾರಿಗೆ ಗಂಡ ರಾಕೇಶ್ ಅಡ್ಡಗಾಲಾಗುತ್ತಾನೆ ಎಂದು ಆತನ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ವರದಿಯಾಗಿದೆ.
ಒಂದು ದಿನ ಗಂಡನನ್ನು ಮನೆಗೆ ಕರೆದ ರಾಧಾ, ಅಂದೇ ಪ್ರಿಯಕರ ಸುಭಾಶ್ ಜೊತೆ ಸೇರಿ ಆತನ ಹತ್ಯೆ ಮಾಡಿದ್ದಳು. ನಂತರ ರಾಕೇಶ್ ಶವವನ್ನು ತುಂಡರಿಸಿ ಅದಕ್ಕೆ ಕೆಮಿಕಲ್ ಹಾಕಿ ನಾಶ ಮಾಡಲು ಯತ್ನಿಸಿದ್ದರು. ಈ ವೇಳೆ ಸ್ಪೋಟವಾಗಿ ವಿಚಾರ ಬಹಿರಂಗವಾಗಿದೆ.