ನವದೆಹಲಿ, ಸೆ 21(DaijiworldNews/MS): ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಮಾಡಲು ಅವಕಾಶ ಕಲ್ಪಿಸುವುದಾಗಿ ಮಧ್ಯಪ್ರದೇಶ ಸರ್ಕಾರದ ಘೋಷಣೆ ಮಾಡಿದ್ದು ಇದರ ಬೆನ್ನಲ್ಲೇ ನೆರೆಯ ಉತ್ತರ ಪ್ರದೇಶವು ಪ್ರಾದೇಶಿಕ ಭಾಷೆಯಲ್ಲೇ ಎಂಬಿಬಿಎಸ್ ಕೋರ್ಸ್ ಬೋಧಿಸುವಕ್ಕೆ ಇಂಗಿತ ವ್ಯಕ್ತಪಡಿಸಿತ್ತು. ಆದರೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್ಎಂಸಿ) ಇದಕ್ಕೆ ಬ್ರೇಕ್ ಹಾಕಿದ್ದು ವೈದ್ಯಕೀಯ ಶಿಕ್ಷಣ ಇಂಗ್ಲಿಷ್ ಹೊರತುಪಡಿಸಿ ಇತರ ಭಾಷೆಗಳಲ್ಲಿ ವೈದ್ಯಕೀಯ ಕೋರ್ಸ್ಗಳಿಗೆ ಅವಕಾಶ ನೀಡುವಂತೆ ನಿಯಮಗಳನ್ನು ತಿದ್ದುಪಡಿ ಮಾಡುವ ಯಾವುದೇ ಯೋಜನೆ ಇಲ್ಲ ಹಾಗೂ ಈ ರೀತಿಯ ಯೋಜನೆಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಎನ್ಎಂಸಿ ಸ್ಪಷ್ಟಪಡಿಸಿದೆ.
ಸೆಪ್ಟೆಂಬರ್ 14 ರಂದು ಹಿಂದಿ ದಿವಸ್ ಸಂದರ್ಭದಲ್ಲಿ, ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಅವರು "ರಾಜ್ಯದಲ್ಲಿ ಹಿಂದಿಯಲ್ಲಿ ಪ್ಯಾರಾಮೆಡಿಕಲ್ ಕೋರ್ಸ್ಗಳ ಹೊರತಾಗಿ ಎಂಬಿಬಿಎಸ್ ಕೋರ್ಸ್ಗಳನ್ನು ಹೇಗೆ ಪರಿಚಯಿಸಬೇಕು ಎಂಬುದನ್ನು ನಿರ್ಧರಿಸಲು ಸಮಿತಿಯನ್ನು ರಚಿಸಲಾಗುತ್ತಿದೆ" ಎಂದು ಹೇಳಿದ್ದರು.
"ರಾಜ್ಯ ಸರ್ಕಾರವು ಇಂತಹ ಪ್ರಸ್ತಾವನೆಯೊಂದಿಗೆ ಆಯೋಗವನ್ನು ಸಂಪರ್ಕಿಸಿಲ್ಲ, ಅದು ಕಾರ್ಯಸಾಧ್ಯವೂ ಅಲ್ಲ, ಇಂಗ್ಲಿಷ್ ಹೊರತುಪಡಿಸಿ ಬೇರೆ ಯಾವುದೇ ಭಾಷೆ ಬದಲಾಯಿಸುವ ಯಾವುದೇ ಯೋಜನೆ ಇಲ್ಲ ಯಾವುದೇ ರಾಜ್ಯ ಸರ್ಕಾರವು ಅಂತಹ ಕೋರ್ಸ್ ಅನ್ನು ಪರಿಚಯಿಸಿದರೆ, ಅದನ್ನು ಎನ್ಎಂಸಿ ಗುರುತಿಸುವುದಿಲ್ಲ ಎಂದು ಅವರು ಹೇಳಿದರು. "ಯಾವುದೇ ರಾಜ್ಯ ಸರ್ಕಾರವು ಅಂತಹ ಕೋರ್ಸ್ ಅನ್ನು ಪರಿಚಯಿಸಿದರೆ, ಅದನ್ನು ಎನ್ಎಂಸಿ ಮಾನ್ಯ ಮಾಡುವುದಿಲ್ಲ" ಎಂದು ಪದವಿಪೂರ್ವ ವೈದ್ಯಕೀಯ ಶಿಕ್ಷಣ ಮಂಡಳಿಯ ಅಧ್ಯಕ್ಷ ಅರುಣ ವಿ ವಣಿಕರ್ ಹೇಳಿದ್ದಾರೆ.
ಆದರೆ ಕೇಂದ್ರ ಶಿಕ್ಷಣ ಸಚಿವಾಲಯದಲ್ಲಿನ ಮೂಲಗಳು ಇದಕ್ಕೆ ತದ್ವಿರುದ್ಧವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಲ್ಲೇಖಿಸಿದ್ದು, ಅದರಲ್ಲಿ ತಾಂತ್ರಿಕ ಶಿಕ್ಷಣ, ವೈದ್ಯಕೀಯ, ಕಾನೂನು, ಇಂಜಿನಿಯರಿಂಗ್ ಸೇರಿದಂತೆ ಎಲ್ಲಾ ಕೋರ್ಸ್ ಗಳನ್ನೂ ಮಾತೃಭಾಷೆಯಲ್ಲಿ ಬೋಧಿಸುವ ಅಂಶಗಳನ್ನೊಳಗೊಂಡಿದೆ ಎಂದು ಹೇಳಿದೆ.