ಬೆಂಗಳೂರು, ಸೆ 20 (DaijiworldNews/MS): ಡ್ರಗ್ ಮಾಫಿಯಾ ಮಿತಿ ಮೀರಿದ್ದು, ಯುವಕರು, ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆಯ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವಪೀಳಿಗೆಯನ್ನು ನಿಷ್ಕ್ರಿಯಗೊಳಿಸುವ ದೊಡ್ಡ ಸಂಚು ಇದರ ಹಿಂದಿದೆ. ಈ ನಡುವೆ ಡ್ರಗ್ ಮಾಫಿಯಾ ಮೂಲೋತ್ಪಾಟನೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಬಗ್ಗೆ ಸ್ರಾಣಿ ಟ್ವೀಟ್ ಮಾಡಿರುವ ಅವರು, " ಯುವಜನರನ್ನು ಗುರಿಯಾಗಿಸಿ ನಡೆಯುತ್ತಿರುವ ಸಮಾಜಘಾತುಕ ಕೃತ್ಯ ಡ್ರಗ್ ಮಾಫಿಯಾವನ್ನು ಬಗ್ಗು ಬಡಿಯಲು ಸರ್ಕಾರ ಬದ್ಧವಾಗಿದೆ. ಪೊಲೀಸರು ಡ್ರಗ್ ಮಾಫಿಯಾ ಮೂಲೋತ್ಪಾಟನೆಗೆ ಕಟಿಬದ್ಧರಾಗಿದ್ದು, ಬಹಳಷ್ಟು ಪ್ರಮಾಣದ ಡ್ರಗ್ ವಶಪಡಿಸಿಕೊಳ್ಳಲಾಗಿದೆ. ಮಾಫಿಯಾ ನಿರ್ಮೂಲನೆಗೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಕೋರಿದ್ದಾರೆ.
ಡ್ರಗ್ ಮಾಫಿಯಾ ಜಾಲದ ನಿರ್ಮೂಲನೆಗೆ ಹಾಗೂ ಅಕ್ರಮದಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಗುರುತಿಸಿ, ಬಂಧಿಸಲು ಸಾರ್ವಜನಿಕರು ಸಹಕರಿಸಬೇಕು. ಪೊಲೀಸರಿಗೆ ಅಗತ್ಯ ಮಾಹಿತಿ ಒದಗಿಸಿದರೆ ಡ್ರಗ್ ಮಾಫಿಯಾವನ್ನು ಬುಡಸಮೇತ ಕಿತ್ತುಹಾಕಲು ಇನ್ನಷ್ಟು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.