ನವದೆಹಲಿ, ಸೆ.20 (DaijiworldNews/PY): "ಪ್ರಧಾನಿ ಮೋದಿ ಸರ್ಕಾರದ ಲಸಿಕೆ ಆಂದೋಲನದ ಬಗ್ಗೆ ನೀಡಿರುವ ಬೇಜವಾಬ್ದಾರಿಯುತ ಹೇಳಿಕೆಗಳ ಕುರಿತು ಪ್ರತಿಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲಿ" ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ತಿಳಿಸಿದ್ದಾರೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿ ವೇಳೆ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು 2.5 ಕೋಟಿ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಇದು ವಿಶ್ವ ದಾಖಲೆಯಾಗಿದೆ" ಎಂದು ಹೇಳಿದ್ದಾರೆ.
"ದಾಖಲೆ ಪ್ರಮಾಣದ ಲಸಿಕೆ ನೀಡಿಕೆ ಹಾಗೂ ಲಸಿಕೆ ಆಂದೋಲನದ ಕುರಿತು ಮೌನ ವಹಿಸಿರುವುದು ಹಾಗೂ ಒಂದು ವರ್ಷದಿಂದ ನೀಡಿರುವ ಬೇಜವಾಬ್ದಾರಿಯುತ ಹೇಳಿಕೆಗಳ ಬಗ್ಗೆ ವಿಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದಿದ್ದಾರೆ.
ಈ ವರ್ಷ ಲಸಿಕೆ ಆಂದೋಲನ ಪ್ರಾರಂಭವಾದ ನಂತರ ಜೆ.ಪಿ ನಡ್ಡಾ ಅವರು ಎರಡನೇ ಬಾರಿಗೆ ಏಮ್ಸ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ್ದು, ಈ ಸಂದರ್ಭ ಲಸಿಕೆ ಹಾಕಿಕೊಳ್ಳಲು ಕೇಂದ್ರಕ್ಕೆ ಬಂದಿದ್ದ ಜನರೊಂದಿಗೆ ಮಾತುಕತೆ ನಡೆಸಿದ್ದಾರೆ.
ಪ್ರಧಾನಿ ಮೋದಿ ಅವರ ಜನ್ಮದಿನದಂದು ಚಾಲನೆ ನೀಡಿದ ಸೇವೆ ಹಾಗೂ ಸಂಪೂರ್ಣ ಅಭಿಯಾನದ ಭಾಗವಾಗಿ ಜೆ.ಪಿ ನಡ್ಡಾ ಈ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.