ಬೆಂಗಳೂರು, ಸೆ. 20 (DaijiworldNews/HR): "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಪ್ರಾಯೋಜಿತ ಹೋರಾಟ ಎಂಬ ಮುಖ್ಯಮಂತ್ರಿ ಬೊಮ್ಮಾಯಿಯವರ ಹೇಳಿಕೆಗೆ ಅವರು ಕೂಡಲೇ ರೈತರ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರೈತರು ತಮ್ಮ ಹಕ್ಕಿನ ರಕ್ಷಣೆಗಾಗಿ ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದು, ಈ ಹೋರಾಟವನ್ನು ಪ್ರಾಯೋಜಿತ ಹೋರಾಟ ಎಂದು ಮುಖ್ಯಮಂತ್ರಿಗಳು ಹೇಳಿರುವುದು ಸರಿಯಲ್ಲ" ಎಂದರು.
ಇನ್ನು ರೈತರ ಹೋರಾಟ ಕೇವಲ ಅಲ್ಲಿರುವ ರೈತರ ಹೋರಾಟವಲ್ಲ. ಇದು ಇಡೀ ದೇಶದ ರೈತರಿಗೆ ಸಂಬಂಧಿಸಿದ ಹೋರಾಟ. ಅವರ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಈ ಹೋರಾಟಕ್ಕೆ ವಿಶ್ವದ ಅನೇಕ ನಾಯಕರುಗಳು ಬೆಂಬಲ ವ್ಯಕ್ತಪಡಿಸಿದ್ದಾರೆ" ಎಂದಿದ್ದಾರೆ.
"ಬೊಮ್ಮಾಯಿ ಹೇಳಿಕೆಯಂತೆ ಈ ಹೋರಾಟ ಕಾಂಗ್ರೆಸ್ ಪ್ರಾಯೋಜಿತವಲ್ಲ. ರೈತರು ಸದುದ್ದೇಶದಿಂದ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ" ಎಂದು ಹೇಳಿದ್ದಾರೆ.