ಬೆಂಗಳೂರು, ಸೆ.20 (DaijiworldNews/PY): "ಆಡಳಿತದಲ್ಲಿ ಯಾವುದೇ ಪಕ್ಷವಿರಲಿ ಬೆಲೆ ಸತತವಾಗಿ ಏರಿಕೆಯಾಗುತ್ತಲೇ ಇದೆ. ಬೆಲೆ ಏರಿಕೆ ನಿರಂತರವಾಗಿ ಹೆಚ್ಚಳವಾಗುತ್ತಲೇ ಇದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, "ಇದೇ ಮೊದಲ ಬಾರಿಗೆ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಈ ಹಿಂದೆಯೂ ಚರ್ಚೆ ನಡೆದಿದೆ. ಸಂಸತ್ತಿನಲ್ಲೂ ಕೂಡಾ ತೀಕ್ಷ್ಣವಾದ ಚರ್ಚೆಯಾಗಿದೆ. ಬೆಲೆ ಏರಿಕೆ 60ರ ದಶಕದಿಂದಲೂ ಆರಂಭವಾಗಿದೆ" ಎಂದು ವಿಪಕ್ಷದವರಿಗೆ ತಿರುಗೇಟು ನೀಡಿದ್ದಾರೆ.
"ಪ್ರಸ್ತುತ ಇರುವ ಕೇಂದ್ರ ಸರ್ಕಾರ ಬೆಲೆ ಹೆಚ್ಚಳ ಮಾಡಿದೆ ಎನ್ನುವುದು ಸೂಕ್ತವಲ್ಲ. ವಿಪಕ್ಷದ ನಾಯಕರು ಕ್ರಮಿನಲ್ ಲೂಟ್ ಎನ್ನುವ ಪದ ಬಳಕೆ ಮಾಡಿದ್ದಾರೆ. ಕ್ರಿಮಿನಲ್ ಲೂಟ್ ಮಾಡಿದ್ದಾರೆ ಎಂದು ನಾನು ಹೇಳುತ್ತೇನೆ. ವಿಪಕ್ಷ ನಾಯಕರ ಮಾತನ್ನು ನಾನು ಒಪ್ಪುವುದಿಲ್ಲ" ಎಂದಿದ್ದಾರೆ.
ನರೇಂದ್ರ ಮೋದಿ ಸರ್ಕಾರ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದಾರೆ ಎಂದಿದ್ದಾರೆ. ಹಾಗಾದರೆ ದೆಹಲಿಯಲ್ಲಿ ರೈತರು ಏಕೆ ಚಳವಳಿ ಮಾಡುತ್ತಾರೆ ಎಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದರೆ, ರೈತರು ಸುಮ್ಮನೆ ಚಳವಳಿ ಮಾಡುತ್ತಿದ್ದಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
"ಅಲ್ಲಿ ಮಾಡುತ್ತಿರುವುದು ಸ್ಪಾನ್ಸರ್ ಚಳವಳಿಯಾಗಿದೆ. ರಾಜಕೀಯ ಪ್ರೇರಿತವಾಗಿದ್ದರೆ ಅದು ಸ್ಪಾನ್ಸರ್ ಚಳವಳಿ" ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.