ಚಂಡೀಗಡ, ಸೆ. 20 (DaijiworldNews/HR): ಪಂಜಾಬ್ನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಚರಣ್ಜಿತ್ ಸಿಂಗ್ ಚನ್ನಿ ವಿರುದ್ಧ 2018ರಲ್ಲಿ ಐಎಎಸ್ ಮಹಿಳಾ ಅಧಿಕಾರಿ ಒಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಮೀಟೂ ಆರೋಪ ಇದೀಗ ಮತ್ತೆ ಮರುಜೀವ ಪಡೆದಿದೆ.
ಮೀಟೂ ಅಭಿಯಾನ ಸದ್ದು ಮಾಡಿದ ಸಂದರ್ಭ ಚನ್ನಿ ಅವರ ಮೇಲೆ ಈ ಆರೋಪ ಕೇಳಿ ಬಂದಿದ್ದು, ಪಂಜಾಬ್ ಮಹಿಳಾ ಆಯೋಗವು ಈ ವರ್ಷ ಮೇ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ಆರೋಪದ ಕುರಿತಾಗಿ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಕಳುಹಿಸಿತ್ತು.
ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದು, "ಕಾಂಗ್ರೆಸ್ ಪಕ್ಷವು ಪಂಜಾಬ್ ಸಿಎಂ ಆಗಿ ಆಯ್ಕೆ ಮಾಡಿರುವ ಚರಣ್ಜಿತ್ ಸಿಂಗ್ ಚನ್ನಿ ಅವರು 3 ವರ್ಷಗಳ ಹಿಂದಿನ ಮೀಟೂ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಅವರ ಮೇಲೆ 2018 ರಲ್ಲಿ ಮಹಿಳಾ ಐಎಎಸ್ ಅಧಿಕಾರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪವಿದೆ. ಅದನ್ನು ಮುಚ್ಚಿಹಾಕುವ ಯತ್ನ ನಡೆದಿತ್ತು. ಆದರೆ, ಮಹಿಳಾ ಆಯೋಗವು ನೋಟಿಸ್ ಕಳುಹಿಸಿದ ಬಳಿಕ ಪ್ರಕರಣ ಮರುಜೀವ ಪಡೆದಿದ್ದು, ವೆಲ್ ಡನ್ ರಾಹುಲ್" ಎಂದು ಬರೆದುಕೊಂಡಿದ್ದಾರೆ.