ಬೆಂಗಳೂರು, ಸೆ.20 (DaijiworldNews/PY): "ಕಾಂಗ್ರೆಸ್ಸಿಗರು ನಮ್ಮ ಶಾಸಕರನ್ನು ಸೆಳೆದರು. ಆ ಕಾರಣದಿಂದ ಕಾಂಗ್ರೆಸ್ 130 ರಿಂದ 78ಕ್ಕೆ ಕುಸಿದಿದ್ದು, ಈಗ ಕಾಂಗ್ರೆಸ್ 78ರಿಂದ 38ಕ್ಕೋ, 28ಕ್ಕೋ ಬರುತ್ತೆ. ಅದರ ಫಲ ಅವರೇ ಅನುಭವಿಸುತ್ತಾರೆ" ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಕಾಂಗ್ರೆಸ್ ಗಾಳ ವಿಚಾರದ ಬಗ್ಗೆ ತಲೆಯೇ ಕೆಡಿಸಿಕೊಂಡಿಲ್ಲ. ಇದರಿಂದ ನಾನು ಅಧೀರನಾಗಿಲ್ಲ. ನಾವು ಕಾಂಗ್ರೆಸ್ನೊಂದಿಗೆ ಸಂಪರ್ಕದಲ್ಲಿರಿವ ನಮ್ಮ ಶಾಸಕರ ವಿರುದ್ದ ಕ್ರಮ ಕೈಗೊಳ್ಳುವುದಿಲ್ಲ. ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ" ಎಂದು ಹೇಳಿದ್ದಾರೆ.
"ದೇವಾಲಯ ತೆರವು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೇವಾಲಯ ಕೆಡವದೇ ಇರುತ್ತಿದ್ದರೆ, ಕಟ್ಟುವ ಪ್ರಶ್ನೆಯೇ ಬರುತ್ತಿರಲಿಲ್ಲ. ಈಗ ಸರ್ಕಾರ ಮುಖಭಂಗಕ್ಕೆ ಒಳಗಾಗಿದೆ. ಜನರನ್ನು ಓಲೈಸುವ ಸಲುವಾಗಿ ದೇವಾಲಯ ಕಟ್ಟುತ್ತಿದ್ದಾರೆ" ಎಂದಿದ್ದಾರೆ.
"ಭಾನುವಾರ ಮಾಜಿ ಸಿಎಂ ಯಡಿಯೂರಪ್ಪ ಅವರು ಆಪರೇಷನ್ ಹಸ್ತ ಬಗ್ಗೆ ಮಾತನಾಡಿದ್ದಾರೆ. ಅವರು ತಮಗೆ ಇದ್ದ ಮಾಹಿತಿಯನ್ನು ಹೇಳಿದ್ದಾರೆ. ಅದು ಅವರ ಪಕ್ಷಕ್ಕೆ ಸೇರಿದ ವಿಚಾರ. ಇದೆಲ್ಲಾ ಹಳೆಯ ಸರಕು" ಎಂದು ಹೇಳಿದ್ದಾರೆ.
"ರಾಜ್ಯದಲ್ಲಿ ಆಪರೇಷನ್ ಹಸ್ತ, ಆಪರೇಷನ್ ಕಮಲ ನಿರಂತರವಾಗಿ ನಡೆಯುತ್ತಿದೆ. ಈ ಆಪರೇಷನ್ಗಳು ತಾತ್ಕಾಲಿಕ ಅವಧಿಯಲ್ಲಿ ಕೆಲವರಿಗೆ ಸಂತಸ ತಂದಿರಬಹುದು. ಆದರೆ, ಇದು ದೀರ್ಘಾವಧಿಯಲ್ಲಿ ಕೆಲಸ ಮಾಡುವುದಿಲ್ಲ" ಎಂದಿದ್ದಾರೆ.