ಬೆಂಗಳೂರು, ಸೆ.20 (DaijiworldNews/PY): "ಬೆಲೆ ಏರಿಕೆ ವಿರುದ್ದ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ" ಎಂದು ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, "ಡೀಸೆಲ್ಗೆ 25 ರೂ., ಪೆಟ್ರೋಲ್ಗೆ 20 ರೂ., ಅಡುಗೆ ಅನಿಲ ದರ 150 ರೂ. ಹಾಗೂ ಇನ್ನಿತರ ಅಗತ್ಯ ವಸ್ತುಗಳ ದರ ಶೇ. 20ರಷ್ಟು ಕಡಿಮೆ ಮಾಡುವಂತೆ ಸರ್ಕಾರಕ್ಕೆ ನಾವು ಒತ್ತಾಯಿಸುತ್ತಿದ್ದೇವೆ. ಆದರೆ ಬೆಲೆ ಇಳಿಕೆ ಮಾಡುವ ಕುರಿತು ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಚಕಾರವೆತ್ತುತ್ತಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕೊರೊನಾದ ಸಂಕಷ್ಟದ ನಡುವೆ ಬೆಲೆ ಏರಿಕೆ ಮಾಡುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೊಳಗಾಗುವಂತೆ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳು ತಮ್ಮ ತಾಳಿ ಮಾರಿ ಬದುಕುವ ಪರಿಸ್ಥಿತಿ ಬಂದಿದೆ. ಇಂತಹ ಸ್ಥಿತಿ ಬಂದೊದಗಿದರೂ ಜನರ ಪರವಾಗಿ ಧ್ವನಿ ಎತ್ತದೇ ಸುಮ್ಮನಿರಲು ಸಾಧ್ಯವೇ?" ಎಂದು ಕೇಳಿದ್ದಾರೆ.
"ಬೆಲೆ ಇಳಿಕೆಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ದ ಯುವಜನತೆ ಕೂಡಾ ಹೋರಾಟ ನಡೆಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಕಿತ್ತೊಗೆಯುವವರೆಗೂ ಶ್ರಮಿಸಬಾರದು" ಎಂದಿದ್ದಾರೆ.
"ಕೊರೊನಾ ಕಾರಣದಿಂದ ಹಲವಾರು ಮಂದಿ ತಮ್ಮ ಆಸ್ತಿ-ಪಾಸ್ತಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಕೊರೊನಾ ವೇಳೆ ಘೋಷಿಸಿದ ಆರ್ಥಿಕ ಪ್ಯಾಕೇಜ್ ಅನ್ನು ಸರ್ಕಾರ ಯಾರಿಗೂ ನೀಡಿಲ್ಲ, ಅಲ್ಲದೇ, ಪರಿಹಾರವನ್ನೂ ಕೊಟ್ಟಿಲ್ಲ. ಜನರು ಇಂದು ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ರೋಸಿ ಹೋಗಿದ್ದಾರೆ" ಎಂದು ಹೇಳಿದ್ದಾರೆ.