ಮುಂಬೈ, ಸೆ 20 (DaijiworldNews/MS): ಕಳೆದ ವಾರ ಮುಂಬೈ ಮನೆ ಮತ್ತು ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯ ಪರಿಶೀಲನೆಯಲ್ಲಿ 20 ಕೋಟಿ ರೂ.ಗಳಿಗೂ ಹೆಚ್ಚು ತೆರಿಗೆ ವಂಚನೆಯ ಆರೋಪ ಎದುರಿಸುತ್ತಿರುವ ನಟ ಸೋನು ಸೂದ್ ಮೌನ ಮುರಿದಿದ್ದಾರೆ. ಅವರ ಪ್ರತಿಷ್ಠಾನದಲ್ಲಿ "ಪ್ರತಿ ರೂಪಾಯಿಯೂ ಜೀವ ಉಳಿಸುವ ಸರದಿಗಾಗಿ ಕಾಯುತ್ತಿದೆ" ಎಂದು ಹೇಳಿದ್ದಾರೆ.
ಟ್ವಿಟರ್ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಠಿಣ ದಾರಿಯಲ್ಲಿ ಪ್ರಯಾಣವು ಸುಲಭವೆಂದು ತೋರುತ್ತದೆ, ಇದು ಪ್ರತಿಯೊಬ್ಬ ಭಾರತೀಯನ ಪ್ರಾರ್ಥನೆಯ ಪರಿಣಾಮವೆಂದು ತೋರುತ್ತದೆ ಎಂದು ಬರೆದುಕೊಂಡಿದ್ದಾರೆ.
ನನ್ನ ಫೌಂಡೇಶನ್ನಲ್ಲಿರುವ ಪ್ರತಿಯೊಂದು ರೂಪಾಯಿ ಕೂಡ ಒಂದು ಅಮೂಲ್ಯ ಜೀವವನ್ನು ಉಳಿಸಲು ಮತ್ತು ಅಗತ್ಯ ಇರುವವರನ್ನು ತಲುಪಲು ಅದರ ಸರತಿಗಾಗಿ ಕಾಯುತ್ತಿದೆ' ಎಂದು ಸೂದ್ ಬರೆದಿದ್ದಾರೆ. ಜೊತೆಗೆ, ಐಟಿ ಅಧಿಕಾರಿಗಳ ಪರಿಶೀಲನೆ ಕುರಿತು, 'ನಾನು ಕೆಲವು ಅತಿಥಿಗಳನ್ನು ನೋಡಿಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದೆ. ಆದ್ದರಿಂದ ಕಳೆದ ನಾಲ್ಕು ದಿನ ನಿಮ್ಮ ಸೇವೆಯಲ್ಲಿ ತೊಡಗಲು ಸಾಧ್ಯವಾಗಲಿಲ್ಲ. ಈಗ ಮತ್ತೆ ನಿಮ್ಮ ಸೇವೆಗೆ ಹಾಜರಾಗಿದ್ದೇನೆ. ನನ್ನ ಪ್ರಯಾಣ ಮುಂದುವರಿಯುತ್ತದೆ' ಎಂದಿದ್ದಾರೆ.
48 ವರ್ಷದ ನಟ, ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಅವರ ಪರೋಪಕಾರಿ ಪ್ರಯತ್ನಗಳು ಭಾರೀ ಪ್ರಶಂಸೆಯನ್ನು ಗಳಿಸಿದ್ದವು. ಆದರೆ ಕಳೆದ ವಾರ ಆದಾಯ ತೆರಿಗೆ ಇಲಾಖೆಯು ಸತತವಾಗಿ ನಾಲ್ಕು ದಿನಗಳ ಕಾಲ ಅವರ ಮನೆ ಕಚೇರಿ ಮೇಲೆ ದಾಳಿ ಮಾಡಿತು, ಅವರು ₹ 20 ಕೋಟಿಗೂ ಹೆಚ್ಚು ಮೌಲ್ಯದ ತೆರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿದೆ.