ದಾವಣಗೆರೆ,ಸೆ. 20 (DaijiworldNews/HR): ಬೆಂಗಳೂರಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಘಟನೆ ದಾವಣಗೆರೆಯಲ್ಲಿ ಸಂಭವಿಸಿದೆ.
ಮೃತಪಟ್ಟವರನ್ನು ದಾವಣಗೆರೆಯ ಭಾರತ್ ಕಾಲನಿ ನಿವಾಸಿಗಳಾದ ಕೃಷ್ಣ ನಾಯಕ(35), ಇವರ ಪತ್ನಿ ಸುಮಾ(30), ಮಗು ಧ್ರುವ(6) ಎಂದು ಗುರುತಿಸಲಾಗಿದೆ.
ಲಾರಿ ಚಾಲಕನಾಗಿ ಕೃಷ್ಣ ನಾಯಕ ಕೆಲಸ ಮಾಡುತ್ತಿದ್ದು, ಇವರ ಪತ್ನಿ ಸುಮಾಗೆ ಹಲವು ದಿನಗಳಿಂದ ಅನಾರೋಗ್ಯ ಕಾಡುತ್ತಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಓಡಾಡುತ್ತಿದ್ದ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದು ಇದರಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಪತ್ನಿ ಮತ್ತು ಮಗುವಿಗೆ ವಿಷ ಕುಡಿಸಿ ಬಳಿಕ ಕೃಷ್ಣನಾಯಕ್ ನೇಣು ಹಾಕಿಕೊಂಡಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ದಾವಣಗೆರೆ ಆರ್ಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.