ನವದೆಹಲಿ, ಸೆ.20 (DaijiworldNews/PY): "ಬೆಲೆ ಏರಿಕೆ ಸೇರಿದಂತೆ ಉದ್ಯೋಗ ಸೃಷ್ಟಿ, ರೈತರಿಗೆ ಬಾಕಿ ನೀಡುವುದು ಹಾಗೂ ಹಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಿಜೆಪಿ ಸೋತಿದೆ" ಎಂದು ಉತ್ತರಪ್ರದೇಶ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಯುಪಿ ಸರ್ಕಾರವು ನಾಲ್ಕೂವರೆ ವರ್ಷದ ಅವಧಿಯಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕಿತ್ತು. ಆದರೆ, ಅದರ ಬದಲು ಕೇವಲ ಸುಳ್ಳುಗಳನ್ನೇ ಮುಂದುವರಿಸಿಕೊಂಡು ಬರುತ್ತಿದೆ" ಎಂದಿದ್ದಾರೆ.
"ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಗೋಧಿ, ಕಬ್ಬು, ಭತ್ತ, ಆಲೂಗಡ್ಡೆ ಬೆಳೆಗಳ ಮೇಲಿನ ರೈತರ ಬಾಕಿ ಹಣ ನೀಡುವುದು, ವಿದ್ಯುತ್ ದರ ಕಡಿಮೆ ಮಾಡುವುದು ಹಾಗೂ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಯುಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ" ಎಂದು ಹೇಳಿದ್ದಾರೆ.
"ಉತ್ತರಪ್ರದೇಶಕ್ಕೆ ಬಿಜೆಪಿ ಸಕಾರ ಏನು ಮಾಡಿದೆ?. ಅಪೌಷ್ಟಿಕತೆ, ಮಹಿಳೆಯರ ಮೇಲಿನ ಅಪರಾಧ, ಅಪಹರಣ, ಕೊಲೆ ಪ್ರಕರಣ ಹಾಗೂ ದಲಿತರ ಮೇಲಿನ ದೌರ್ಜನ್ಯಗಳಲ್ಲಿ ರಾಜ್ಯವು ಮೊದಲ ಸ್ಥಾನ ಪಡೆಯುವಂತೆ ಮಾಡಿದೆ" ಎಂದಿದ್ದಾರೆ.