ಬೆಂಗಳೂರು, ಸೆ.20 (DaijiworldNews/PY): "ನಮ್ಮೊಂದಿಗೆ ಬಿಜೆಪಿ ಸಚಿವರು ಸೇರಿದಂತೆ ಇತರೆ ಶಾಸಕರು ಸಂಪರ್ಕದಲ್ಲಿದ್ದಾರೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
"ಕಾಂಗ್ರೆಸ್ ಪಕ್ಷದ 20 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿ ಸಚಿವರೋರ್ವರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರು ವಿ ಎಸ್ ಉಗ್ರಪ್ಪ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಈ ವಿಚಾರವಾಗಿ ನಾವು ಉಗ್ರಪ್ಪ ಅವರ ಪ್ರತಿಕ್ರಿಯೆ ಪಡೆದುಕೊಳ್ಳಲು ಯತ್ನಿಸಿದ್ದು, ಆ ಸಚಿವರು ಯಾರು ಎನ್ನುವ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ" ಎಂದಿದ್ದಾರೆ.
ಈ ವಿಚಾರವಾಗಿ ಉಗ್ರಪ್ಪ ಅವರು ಮಾತನಾಡಿದ್ದು, "ಯಾವುದೇ ಮಾಹಿತಿಯನ್ನು ನಾನು ಬಹಿರಂಗಪಡಿಸುವುದಿಲ್ಲ. ಬಿಜೆಪಿ ಜೊತೆ ಅತೃಪ್ತಿ ಹೊಂದಿದ ಹಾಗೂ ಕಾಂಗ್ರೆಸ್ನೊಂದಿಗೆ ಸಂಪರ್ಕದಲ್ಲಿರುವ ಅನೇಕ ಶಾಸಕರು ಇದ್ದಾರೆ" ಎಂದು ಹೇಳಿದ್ದಾರೆ.
"ಜೆಡಿಎಸ್ ಹಾಗೂ ಜನತಾದಳ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ಹಲವು ನಾಯಕರು ಅಸಮಾಧಾನಗೊಂಡಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ಚರ್ಚಿಸುತ್ತಿದೆ" ಎಂದು ತಿಳಿಸಿದ್ದಾರೆ.
ಹೆಚ್. ನಾಗೇಶ್ ಹಾಗೂ ಆರ್ ಶಂಕರ್ ಕೂಡಾ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿರುವುದಕ್ಕೆ ಅಸಮಾಧನಾಗೊಂಡಿದ್ದಾರೆ ಮೂಲಗಳು ಹೇಳಿವೆ.