ಛತ್ತೀಸಗಢ, ಸೆ 20 (DaijiworldNews/MS): ಛತ್ತೀಸಗಢ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ರಾಜಿಂದರ್ ಪಾಲ್ ಸಿಂಗ್ ಭಾಟಿಯಾ ತಮ್ಮ ರಾಜಾನಂದಗಾವ್ ನಿವಾಸದಲ್ಲಿ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆ ಎಂದು ಶಂಕಿಸಿರುವ ಪೊಲೀಸ್ ರ ತಂಡ, ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ.
ಆದಾಗ್ಯೂ, 72 ವರ್ಷದ ರಾಜಿಂದರ್ ಪಾಲ್ ಸಿಂಗ್ ಭಾಟಿಯಾ ಅವರ ಆತ್ಮಹತ್ಯೆ ಪತ್ರವನ್ನು ಡಿಸಿಕೊಂಡಿದ್ದಾರೆಯೇ ಇಲ್ಲವೇ ಎಂದು ಪೊಲೀಸರು ದೃಢಪಡಿಸಿಲ್ಲ.
ಈ ವರ್ಷದ ಮಾರ್ಚ್ ತಿಂಗಳಲ್ಲಿ ಭಾಟಿಯಾ ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದರು, ಸೋಂಕಿನಿಂದ ಗುಣಮುಖರಾಗಿದ್ದರೂ ಅವರಿಗೆ ಅನಾರೋಗ್ಯ ಕಾಡುತ್ತಿತ್ತು ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ಖುಜ್ಜಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಭಾಟಿಯಾ ಆಯ್ಕೆಯಾಗಿದ್ದರು. ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದ ಮೊದಲ ಬಿಜೆಪಿ ಸರ್ಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವರಾಗಿದ್ದರು.
2013 ರಲ್ಲಿ, ಅವರು ವಿಧಾನಸಭಾ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಪಕ್ಷದ ವಿರುದ್ಧ ದಂಗೆ ಎದ್ದರು ಮತ್ತು ರಾಜ್ಯ ಚುನಾವಣೆಯ ಸಮಯದಲ್ಲಿ ಖುಜ್ಜಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.ಆ ಬಳಿಕ ಅವರು ಮತ್ತೆ ಪಕ್ಷಕ್ಕೆ ಸೇರಿಕೊಂಡಿದ್ದರು.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821