ಬೆಂಗಳೂರು,ಸೆ. 19 (DaijiworldNews/HR): ನಗರ ತಿಗಳರಪಾಳ್ಯದಲ್ಲಿನ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಮೃತರ ಮನೆಯಲ್ಲಿ ಪೊಲೀಸರು ಇಂದು ಸ್ಥಳ ಮಹಜರು ನಡೆಸಿದ ವೇಳೆ ಮೂರು ಡೆತ್ ನೋಟ್ ಗಳು ಪತ್ತೆಯಾಗಿವೆ.
ಪೊಲೀಸರು ಮನೆಯಲ್ಲಿ ಸ್ಥಳಮಹಜರು ನಡೆಸಿದ ಸಂದರ್ಭದಲ್ಲಿ ಹಲ್ಲೆಗೆರೆ ಶಂಕರ್ ಅವರ ಪುತ್ರ ಮಧುಸಾಗರ್, ಸಿಂಚನಾ ಮತ್ತು ಸಿಂಧೂರಾಣಿ ಬರೆದಿರುವಂತ ಮೂರು ಡೆತ್ ನೋಟ್ ಗಳು ಪತ್ತೆಯಾಗಿವೆ.
ಪುತ್ರ ಮಧುಸಾಗರ್ ಬರೆದಿರುವಂತ ಡೆತ್ ನೋಟ್ ನಲ್ಲಿ ಅಪ್ಪನ ಮೇಲೆ ಹಲವು ಆರೋಪಗಳನ್ನು ಮಾಡಿದ್ದು, ಜೊತೆಗೆ ತಂದೆಯ ಅಕ್ರಮ ಸಂಬಂಧವನ್ನು ಕೂಡ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದ್ದು, ಇದಲ್ಲದೇ ಲ್ಯಾಪ್ ಟಾಪ್ ನಲ್ಲಿಯೂ ಇದಕ್ಕೆ ಸಂಬಂಧಿಸಿದಂತ ಸಾಕ್ಷ್ಯಗಳು ಇದ್ದಾವೆ ಎಂಬುದಾಗಿ ಉಲ್ಲೇಖಿಸಿದ್ದಾರೆ.
ಡೆತ್ ನೋಟ್ 3-4 ಪುಟಗಳಷ್ಟು ಸುದೀರ್ಘವಾಗಿದ್ದು, ಇದರಲ್ಲಿ ಬಹುತೇಕ ತಂದೆಯ ವಿರುದ್ಧವೇ ಇದ್ದಾವೆ. ಸಿಂಧೂರಾಣಿ ಮತ್ತು ಸಿಂಚನಾರಿಂದ ತಂದೆ, ಪತಿಯರ ಮೇಲೆ ಆರೋಪ ಇದೆ ಎನ್ನಲಾಗಿದೆ.