ದಾವಣಗೆರೆ, ಸೆ.19 (DaijiworldNews/PY): "ವಿಪಕ್ಷದವರು ಎಲ್ಲದಕ್ಕೂ ವಿರೋಧ ಮಾಡುವುದೇ ಆಯಿತು. ಅವರಿಗೆ ಲಸಿಕೆ ಜ್ವರ ಬಂದಿದೆ" ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹರಿಹಾಯ್ದಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, "ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಿದ್ದು, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ" ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಮೂಲೆ ಗುಂಪು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಎಸ್ವೈ ಅವರು ನಮ್ಮ ಹಿರಿಯ ನಾಯಕರು. ಅವರಿಗೆ ಸಂಪೂರ್ಣ ಸಹಕಾರ ಇದೆ. ಯಾರೂ ಕೂಡಾ ಅವರನ್ನು ಮೂಲೆ ಗುಂಪು ಮಾಡಿಲ್ಲ" ಎಂದು ಹೇಳಿದ್ದಾರೆ.
"ಕೊರೊನಾ ವಿರುದ್ದ ಹೋರಾಟದಲ್ಲಿ ಯಶಸ್ವಿ ಆಗುತ್ತಿದ್ದೇವೆ. ಇತರ ದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಮಾಡಿದ್ದೇವೆ. ಪ್ರಧಾನಿ ಮೋದಿ ಅವರ ಜನ್ಮದಿನದಂದು ದೇಶದಲ್ಲಿ 2.5 ಕೋಟಿ ಲಸಿಕೆ ಹಾಕಿಸಿದ್ದೇವೆ" ಎಂದಿದ್ದಾರೆ.
"ದೇಶದಲ್ಲಿ ಶೇ.70ರಷ್ಟು ಮೊದಲ ಡೋಸ್ ನೀಡಿದ್ದೇವೆ. ಶೇ.30ರಷ್ಟು ಮಂದಿಗೆ ಎರಡನೇ ಡೋಸ್ ನೀಡಿದ್ದೇವೆ. ಪ್ರಧಾನಿ ಮೋದಿ ಹುಟ್ಟುಹಬ್ಬದಂದು ನಡೆದ ಲಸಿಕಾ ಆಂದೋಲನಕ್ಕೆ ವಿಪಕ್ಷಗಳು ಲೇವಡಿ ಮಾಡುವುದು ಸೂಕ್ತವಲ್ಲ" ಎಂದು ಕಿಡಿಕಾರಿದ್ದಾರೆ.