ದಾವಣಗೆರೆ, ಸೆ.19 (DaijiworldNews/PY): "ಹಿಂದೂಗಳ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ಕಾನೂನು ತರಲಾಗುವುದು" ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ದೇವಾಲಯ ತೆರವು ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾರ್ಯಕಾರಿಣಿಯಲ್ಲಿ ವಿಧಾನಪರಿಷತ್ ಚುನಾವಣೆ, ಉಪಚುನಾವಣೆ, ದೇವಾಲಯ ತೆರವು ಮಾಡಿರುವ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸುತ್ತೇವೆ. ಹಿಂದೂಗಳ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ಕಾನೂನುಗಳನ್ನು ಜಾರಿಗೆ ತರಲಾಗುವುದು" ಎಂದಿದ್ದಾರೆ.
"ಬಿಹಾರದಲ್ಲಿ ಕೆಲ ಕಾನೂನುಗಳನ್ನು ಬದಲಾವಣೆ ಮಾಡಿದ್ದಾರೆ. ಅದೇ ರೀತಿಯಾಗಿ ಇಲ್ಲಿಯೂ ಕೂಡಾ ಕೆಲವೊಂದು ಕಾನೂನುಗಳನ್ನು ಬದಲಾವಣೆ ಮಾಡಿ, ಪೂಜಾ ಸ್ಥಳಗಳನ್ನು ಸ್ಥಳಾಂತರ ಮಾಡುವ ಸಲುವಾಗಿ ಕಂದಾಯ ಇಲಾಖೆಯಿಂದ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಮಾತನಾಡಿದ ಅವರು, "ನನಗೆ ಬಿಎಸ್ವೈ ಅವರ ಹೇಳಿಕೆ ಬಗ್ಗೆ ತಿಳಿದಿಲ್ಲ. ಬಿಜೆಪಿಗೆ ಇನ್ನೊಂದು ತಿಂಗಳೊಳಗೆ ಹಲವರು ಸೇರುತ್ತಾರೆ. ಬಹಳಷ್ಟ ಮುಖಂಡರನ್ನು ಸೇರಿಸಿಕೊಳ್ಳಲು ಕೇಂದ್ರದಿಂದ ಅನುಮತಿ ಕೇಳಿದ್ದೇನೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬಿಜೆಪಿಗೆ ಸೇರುತ್ತಾರೆ" ಎಂದಿದ್ದಾರೆ.