ಬೆಂಗಳೂರು, ಸೆ.19 (DaijiworldNews/PY): "ಗೋವಿನ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ರೈತರ ಗೋವಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಲ್ಲಿ ನಿರ್ಲಕ್ಷಿಸಿ ಡೋಂಗಿ ಗೋರಕ್ಷಕರೆಂದು ನಿರೂಪಿಸಿದ್ದಾರೆ" ಎಂದು ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ರಾಜ್ಯಾದ್ಯಂತ ಪಶುವೈದ್ಯಕೀಯ ಸಿಬ್ಬಂದಿಗಳ ಕೊರತೆಯಿಂದ ರೈತರು ತಮ್ಮ ಜಾನುವಾರುಗಳ ಚಿಕಿತ್ಸೆಗೆ ಪರದಾಡುವಂತಾಗಿದೆ, ಈ ಸರ್ಕಾರ ಹೀಗೂ ರೈತರ ಮೇಲೆ ದ್ವೇಷ ತೀರಿಸಿಕೊಳ್ಳುತ್ತಿದೆ. ಗೋವಿನ ಹೆಸರಲ್ಲಿ ರಾಜಕೀಯ ಮಾಡುವ ಬಿಜೆಪಿ ರೈತರ ಗೋವಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಲ್ಲಿ ನಿರ್ಲಕ್ಷಿಸಿ ಡೋಂಗಿ ಗೋರಕ್ಷಕರೆಂದು ನಿರೂಪಿಸಿದ್ದಾರೆ" ಎಂದಿದೆ.
"ಮೊನ್ನೆ ಒಬ್ಬ ಭಯೋತ್ಪಾದಕ ಕತ್ತಿ, ತಲ್ವಾರ್ ಮನೆಯಲಿಟ್ಟುಕೊಳ್ಳಿ ಎಂದು ಕಾನೂನು ಬಾಹಿರದ ಮಾತಾಡುತ್ತಾನೆ. ಮತ್ತೊಬ್ಬ ಮೈಸೂರಿನ ಅಧಿಕಾರಿಗಳಿಗೆ ಕೊಲೆ ಬೆದರಿಕೆಯೊಡ್ಡುತ್ತಾನೆ. ಇನ್ನೊಬ್ಬ ಮುಖ್ಯಮಂತ್ರಿಗೇ ಜೀವ ಬೆದರಿಕೆ ಹಾಕುತ್ತಾನೆ. ಈ ಕ್ರಿಮಿಗಳನ್ನು ಬಂಧಿಸದಿರುವುದೇಕೆ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರವೇ ಇವರನ್ನು ಸಾಕುತ್ತಿದೆ" ಎಂದು ಆರೋಪಿಸಿದೆ.
"ರಾಜ್ಯದ ಕಾನೂನು ಸುವ್ಯವಸ್ಥೆ ಅದೆಷ್ಟು ಅಧೋಗತಿಗೆ ಇಳಿದಿದೆ ಎಂದೆರೆ, ಗೃಹ ಮಂತ್ರಿಯೇ ನನ್ನ ಅತ್ಯಾಚಾರವಾಗುತ್ತಿದೆ ಎನ್ನುವಷ್ಟು, ಮುಖ್ಯಮಂತ್ರಿಗಳಿಗೇ ಕೊಲೆ ಬೆದರಿಕೆ ಹಾಕಿಯೂ ಆರೋಪಿಗಳು ರಾಜಾರೋಷವಾಗಿ ತಿರುಗುವಷ್ಟು. ಇನ್ನು ಸಾಮಾನ್ಯ ಜನತೆಗೆ ರಕ್ಷಣೆ ಸಿಗುವುದೇ?. ಬಿಜೆಪಿ ರಾಜ್ಯದಲ್ಲಿ ತಾಲಿಬಾನ್ ಸಂಸ್ಕೃತಿ ಸ್ಥಾಪಿಸುತ್ತಿದೆ" ಎಂದು ಟೀಕಿಸಿದೆ.