ದಾವಣಗೆರೆ, ಸ. 19 (DaijiworldNews/HR): "ರಾಜ್ಯದಲ್ಲಿ ಆಗಾಗ ಶಾಂತಿ ಕದಡುವ ಪ್ರಸಂಗಗಳು ನಡೆಯುತ್ತಿದ್ದು, ಆ ಸಂದರ್ಭದಲ್ಲಿ ನಮ್ಮೆಲ್ಲ ವರಿಷ್ಠರು ಹಿರಿಯರು ತಮ್ಮ ಅನುಭವ, ಮುತ್ಸದಿತನದಿಂದ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದಾರೆ. ಇಂತಹ ಒಂದು ಪ್ರಸಂಗ ಇತ್ತೀಚಿಗೆ ನಂಜನಗೂಡಿನಲ್ಲಿ ನಡೆದಿದೆ. ದೇವಸ್ಥಾನ ದ್ವಂಸಗೊಳಿಸಲಾಗಿದೆ. ಈ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಇಂತಹ ಅಪಪ್ರಚಾರವನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಂತಹ ಅಚಾತುರ್ಯ ಹಾಗೂ ಶಾಂತಿ ಕದಡುವ ವಿಚಾರಗಳಿಗೆ ಪೂರ್ಣವಿರಾಮ ಹಾಕಲಾಗುವುದು" ಎಂದರು.
ಇನ್ನು "ರಾಜ್ಯ ಸರ್ಕಾರವು ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಕ್ರಮ ವಹಿಸಲಿದ್ದು, ಆ ಭಾಗದ ಜನರ ಭಾವನೆಗಳಿಗೆ ಕಾನೂನಾತ್ಮಕ ರಕ್ಷಣೆ ನೀಡಲಾಗುವುದು. ಎಲ್ಲಾ ಘಟನೆಗಳನ್ನು ಸರಿಪಡಿಸಲಾಗುವುದು" ಎಂದು ತಿಳಿಸಿದ್ದಾರೆ.