ನವದೆಹಲಿ, ಸ. 19 (DaijiworldNews/HR): ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇಳಿಮುಖವಾಗಿರುವ ಕಾರಣ ಭಾರತ ಪ್ರವೇಶಕ್ಕೆ ವಿದೇಶಿ ಪ್ರವಾಸಿಗರಿಗೆ ಸದ್ಯದಲ್ಲೇ ಅನುಮತಿ ದೊರಕಲಿದ್ದು, ಮುಂದಿನ 10 ದಿನಗಳಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಸಾಂಧರ್ಭಿಕ ಚಿತ್ರ
ಪ್ರವಾಸೋದ್ಯಮ, ನಾಗರಿಕ ವಿಮಾನಯಾನ ವಲಯವನ್ನು ಪುನಶ್ಚೇತನಗೊಳಿಸುವ ಯತ್ನವಾಗಿ ಮೊದಲ ಐದು ಲಕ್ಷ ವಿದೇಶಿ ಪ್ರವಾಸಿಗರಿಗೆ ವೀಸಾವನ್ನು ಉಚಿತವಾಗಿ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಕೊರೊನಾದ ಕಾರಣ 2020ರ ಮಾರ್ಚ್ನಲ್ಲಿ ದೇಶದಾದ್ಯಂತ ಲಾಕ್ಡೌನ್ ಘೋಷಣೆಯಾದ ಬಳಿಕ ಪ್ರವಾಸೋದ್ಯಮ, ನಾಗರಿಕ ವಿಮಾನಯಾನ ವಲಯ ಭಾರಿ ನಷ್ಟ ಕಂಡಿದೆ.
ಲಸಿಕೆ ಹಾಕಿಸಿಕೊಂಡ ಪ್ರವಾಸಿಗರಿಗೆ ಮಾತ್ರ ಪ್ರವೇಶವನ್ನು ಸೀಮಿತಗೊಳಿಸಬೇಕೇ ಎಂಬಂತಹ ಕೆಲ ನಿಯಮಗಳ ಬಗ್ಗೆ ಇನ್ನೂ ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.