ಬೆಂಗಳೂರು, ಸೆ.19 (DaijiworldNews/PY): "ಎಲ್ಲರಿಗೂ ಅಕ್ಟೋಬರ್ ಅಂತ್ಯದೊಳಗೆ ಕೊರೊನಾ ಲಸಿಕೆಯ ಮೊದಲ ಡೋಸ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ನಡೆದ ಮಹಾಲಸಿಕೆ ಅಭಿಯಾನದಲ್ಲಿ ರಾಜ್ಯದಲ್ಲಿ 31.60 ಲಕ್ಷ ಮಂದಿಗೆ ಲಸಿಕೆ ನೀಡಿ ದಾಖಲೆ ನಿರ್ಮಿಸಲಾಗಿದೆ" ಎಂದಿದ್ದಾರೆ.
"10 ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ದೇಶದಲ್ಲೇ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯ ನಮ್ಮದಾಗಿದೆ. ಎರಡು ಲಸಿಕೆಯನ್ನು ಡಿ.15ರೊಳಗೆ ಎಲ್ಲರಿಗೂ ನೀಡುವ ಗುರಿ ಇದೆ. ಲಸಿಕೆ ನೀಡಿಕೆಯ ಪ್ರಕ್ರಿಯೆಯನ್ನು ವಷ್ಯಾಂತ್ಯದೊಳಗೆ ಪೂರ್ಣಗೊಳಿಸಲಾಗುವುದು" ಎಂದು ತಿಳಿಸಿದ್ದಾರೆ.
"ಕಾಂಗ್ರೆಸ್ ಲಸಿಕೆ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿತ್ತು. ಕಾಂಗ್ರೆಸ್ಗೆ ಯಾವುದೇ ಬದ್ಧತೆ ಇಲ್ಲ. ಜನರ ಆರೋಗ್ಯದ ವಿಚಾರದಲ್ಲೂ ಕೂಡಾ ರಾಜಕಾರಣ ಮಾಡುವುದು ನೀಚತನ" ಎಂದು ಆರೋಪಿಸಿದ್ದಾರೆ.